ಲೇಹ್(ಲಡಾಖ್):ಪೂರ್ವ ಲಡಾಖ್‌ನ ಮುಧ್ ಗ್ರಾಮವು ಸ್ಥಳೀಯ ಗ್ರಾಮ ಮಟ್ಟದ ಸ್ವಯಂಸೇವಾ ಗುಂಪಾದ ಚಾ ತ್ಸೋಗ್ಸ್ಪಾ(ಬರ್ಡ್ ಅಸೋಸಿಯೇಷನ್) ನೇತೃತ್ವದಲ್ಲಿ ಪಕ್ಷಿ ಸಂರಕ್ಷಣಾ ಉಪಕ್ರಮದ ಕೇಂದ್ರವಾಗಿ ಹೆಸರುವಾಸಿಯಾಗಿದೆ. ಚಾ ತ್ಸೋಗ್ಸ್ಪಾ ಗುಂಪನ್ನು 2003ರಲ್ಲಿ ರಚಿಸಲಾಯಿತು. ಈ ಗುಂಪಿನ ಎಲ್ಲ ಸದಸ್ಯರು 50 ರಿಂದ 70 ವರ್ಷ ವಯಸ್ಸಿನವರಾಗಿದ್ದಾರೆ. 20ಕ್ಕಿಂತ ಹೆಚ್ಚು ವರ್ಷಗಳಿಂದ ಗುಂಪಿನ ಸದಸ್ಯರು ವಲಸೆ ಪಕ್ಷಿಗಳ ಸಂರಕ್ಷಣೆಯಲ್ಲಿ ತೊಡಗಿದ್ದಾರೆ.
ವಿಶೇಷವಾಗಿ ರಡ್ಡಿ ಶೆಲ್ಡಕ್ (ಲಡಾಖಿ ಭಾಷೆಯಲ್ಲಿ ಚಾ ಮುರು) ಮತ್ತು ಬಾರ್ ಹೆಡೆಡ್ ಗೂಸ್ (ಚಾ ನಂಗ್ಪಾ) ಎಂಬ ಎರಡು ಪ್ರಭೇದದ ಪಕ್ಷಿಗಳು ಗಂಭೀರ ಸವಾಲುಗಳನ್ನು ಎದುರಿಸುತ್ತಿವೆ. ಹಿಮನದಿ ತೊರೆಗಳಿಂದ ಉಂಟಾಗಿರುವ ಜೌಗು ಪ್ರದೇಶಗಳು ಈ ವಲಸೆ ಪಕ್ಷಿಗಳ ಸಂತಾನೋತ್ಪತ್ತಿಗೆ ಮತ್ತು ಅವುಗಳ ಆಹಾರ ಒದಗಿಸುವ ನಿರ್ಣಾಯಕ ತಾಣಗಳಾಗಿ ಕಾರ್ಯನಿರ್ವಹಿಸುತ್ತವೆ. ಆದರೆ, ಅವುಗಳ ಆವಾಸ ಸ್ಥಾನದ ನಾಶ, ಮಾನವ ಹಸ್ತಕ್ಷೇಪ ಮತ್ತು ಹವಾಮಾನ ಬದಲಾವಣೆಯೂ ಚಾ ತ್ಸೊಗ್ಸ್ಪಾ ಗುಂಪಿಗೆ ಈ ಕುರಿತು ಅಗತ್ಯ ಕ್ರಮ ತೆಗೆದುಕೊಳ್ಳಲು ಪ್ರೇರೇಪಿಸಿದೆ.
ಗುಂಪಿನ ಸದಸ್ಯರು ಎರಡು ತಿಂಗಳ ಕಾಲ ಜೌಗು ಪ್ರದೇಶಗಳ ಮೇಲ್ವಿಚಾರಣೆ ಮಾಡುವ ಜೊತೆಗೆ ಪಕ್ಷಿಗಳು ಗೂಡುಕಟ್ಟುವಾಗ ಮತ್ತು ಸಂತಾನೋತ್ಪತ್ತಿ ಋತುಗಳಲ್ಲಿ ಅವುಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುತ್ತಾರೆ.
ಮುಧ್ ಗ್ರಾಮದ ನಿವಾಸಿ ಮತ್ತು ಚಾ ತ್ಸೊಗ್ಸ್ಪಾ ಗುಂಪಿನ ಸದಸ್ಯ ನವಾಂಗ್ ಚೋಸ್ಡುಪ್ ಪ್ರತಿಕ್ರಿಯಿಸಿ, ನಮ್ಮ ಗುಂಪಿನಲ್ಲಿ 12 ಜನ ಸದಸ್ಯರಿದ್ದಾರೆ. ನಾವು 14 ನೇ ದಲೈ ಲಾಮಾ ಅವರ ಆಶಯದಿಂದ ಪ್ರೇರಿತರಾಗಿ ರಡ್ಡಿ ಶೆಲ್ಡಕ್ ಅನ್ನು ಸಂರಕ್ಷಿಸುವ ಪ್ರಯತ್ನ ಮಾಡುತ್ತಿದ್ದೇವೆ. 14ನೇ ದಲೈ ಲಾಮಾ ಅವರು 2003ರಲ್ಲಿ ಚಾಂಗ್ಥಾಂಗ್ಗೆ ಭೇಟಿ ನೀಡಿ ರಡ್ಡಿ ಶೆಲ್ಡಕ್ ಪಕ್ಷಿ ಬಗ್ಗೆ ಮಾಹಿತಿ ನೀಡಿದ್ದರು. ಟಿಬೆಟ್ನಲ್ಲಿ ಆಗಾಗ್ಗೆ ಕಂಡುಬರುವ ಈ ಪಕ್ಷಿಗಳು ಈಗ ಪೂರ್ವ ಲಡಾಖ್ನಲ್ಲಿ ಅದರಲ್ಲೂ ವಿಶೇಷವಾಗಿ ಮುಧ್ನಲ್ಲಿ ಕಂಡು ಬರುತ್ತಿವೆ ಎಂದು ತಿಳಿಸಿದರು.
ಜೀವನದುದ್ದಕ್ಕೂ ಪಕ್ಷಿಗಳಿಗೆ ನೆರವು ನೀಡಲು ಬದ್ಧ: ಈ ಪಕ್ಷಿಗಳಿಗೆ ಸುಮಾರು ಎರಡು ತಿಂಗಳವರೆಗೆ ನಮ್ಮ ನೆರವು ಅಗತ್ಯವಿರುತ್ತದೆ. ನಂತರ ಪಕ್ಷಿಗಳು ತಮ್ಮ ಮರಿಗಳನ್ನು ನೋಡಿಕೊಳ್ಳುತ್ತವೆ. ನಾವು ಸರದಿ ಪ್ರಕಾರ ಕಾರ್ಯನಿರ್ವಹಿಸುತ್ತೇವೆ. ಪ್ರತಿದಿನ ಇಬ್ಬರು ಸದಸ್ಯರು ಕರ್ತವ್ಯದಲ್ಲಿರುತ್ತಾರೆ. ಬೆಳಿಗ್ಗೆ 5:30 ರಿಂದ ಸಂಜೆ 6:00 ರವರೆಗೆ, ನಾವು ಹಳ್ಳಿಯಿಂದ ದೂರದಲ್ಲಿರುವ ಕಣಿವೆಯಿಂದ ಪಕ್ಷಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತೇವೆ. ಕಳೆದ 20 ವರ್ಷಗಳಿಂದ ಈ ಕೆಲಸ ಮಾಡುತ್ತಿರುವುದಕ್ಕೆ ನಾವು ಅದೃಷ್ಟವಂತರು ಎಂದು ಭಾವಿಸುತ್ತೇವೆ ಮತ್ತು ನಮ್ಮ ಜೀವನದುದ್ದಕ್ಕೂ ಈ ಪಕ್ಷಿಗಳಿಗೆ ನೆರವು ನೀಡಲು ಬದ್ಧರಾಗಿದ್ದೇವೆ ಎಂದರು.