ನವದೆಹಲಿ:ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ ಕರೆ ಸರಣಿ 11ನೇ ದಿನವೂ ಮುಂದುವರಿದಿದೆ. ಭಾರತೀಯ ವಿಮಾನಯಾನ ಸಂಸ್ಥೆಗಳ 70ಕ್ಕೂ ಹೆಚ್ಚು ವಿಮಾನಗಳಿಗೆ ಗುರುವಾರವೂ ಬಾಂಬ್ ಬೆದರಿಕೆ ಬಂದಿದ್ದು, ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
ಏರ್ ಇಂಡಿಯಾ, ವಿಸ್ತಾರಾ ಮತ್ತು ಇಂಡಿಗೋದ ತಲಾ 20 ವಿಮಾನಗಳಿಗೆ ಬೆದರಿಕೆಗಳು ಬಂದಿದ್ದರೆ, ಆಕಾಶ್ ಏರ್‌ನ 14 ವಿಮಾನಗಳಿಗೆ ಹುಸಿ ಕರೆ ಬಂದಿವೆ ಎಂದು ಮೂಲಗಳು ತಿಳಿಸಿವೆ. ಈ ಮೂಲಕ ಕಳೆದ 11 ದಿನಗಳಲ್ಲಿ ಸುಮಾರು 250 ಅಂತಾರಾಷ್ಟ್ರೀಯ ಮತ್ತು ದೇಶೀಯ ವಿಮಾನಗಳಿಗೆ ಕಿಡಿಗೇಡಿಗಳು ಕಾಟ ನೀಡಿದ್ದಾರೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಆಕಾಶ್ ಏರ್ ವಿಮಾನಯಾನ ಸಂಸ್ಥೆಯ ವಕ್ತಾರರು, "ಅಕ್ಟೋಬರ್ 24ರಂದು ಸಂಸ್ಥೆಯ 14 ವಿಮಾನಗಳಿಗೆ ಭದ್ರತಾ ಎಚ್ಚರಿಕೆ ವಹಿಸುವ ಕರೆಗಳು ಬಂದಿವೆ. ಏರ್ಲೈನ್ಸ್ನ ಕ್ಷಿಪ್ರ ಕಾರ್ಯಪಡೆ ತಂಡಗಳು ಪರಿಸ್ಥಿತಿಯ ಮೇಲೆ ನಿಗಾ ವಹಿಸಿವೆ. ಭದ್ರತೆ ಮತ್ತು ನಿಯಂತ್ರಣ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿವೆ. ಸ್ಥಳೀಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಪ್ರಯಾಣಿಕರ ಸುರಕ್ಷತೆ ಕಾಪಾಡಲಾಗಿದೆ" ಎಂದು ತಿಳಿಸಿದ್ದಾರೆ.