ಅಯೋಧ್ಯೆ: ಮಂಗಳವಾರ ಸಂಜೆ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ನಡೆದ ವಿಸ್ಮಯಕಾರಿ ಘಟನೆಯೊಂದರ ಬಗ್ಗೆ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಟ್ವಿಟರ್ನಲ್ಲಿ ಹಂಚಿಕೊಂಡಿದೆ. ಮಂಗಳವಾರ ಸಂಜೆ ಕೋತಿಯೊಂದು ದೇವಸ್ಥಾನದ ಪ್ರಾಂಗಣದೊಳಗೆ ಬಂದಿದ್ದು ಹಾಗೂ ಸ್ವತಃ ಆಂಜನೇಯ ಸ್ವಾಮಿಯೇ ಶ್ರೀರಾಮನ ದರ್ಶನಕ್ಕೆ ಬಂದಂತೆ ತಮಗೆಲ್ಲ ಭಾಸವಾಗಿದ್ದಾಗಿ ಟ್ರಸ್ಟ್ ತನ್ನ ಅನುಭವವನ್ನು ಹಂಚಿಕೊಂಡಿದೆ. ಈ ಘಟನೆಯ ಬಗ್ಗೆ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಹಂಚಿಕೊಂಡ ಯಥಾವತ್ ಮಾಹಿತಿ ಹೀಗಿದೆ:
"ಇಂದು (ಮಂಗಳವಾರ) ಸಂಜೆ 5:50ರ ಸುಮಾರಿಗೆ ದೇವಸ್ಥಾನದ ದಕ್ಷಿಣ ದ್ವಾರದ ಮಂಟಪದ ಕಡೆಯಿಂದ ಬಂದ ಕೋತಿಯೊಂದು ಗರ್ಭಗುಡಿಯೊಳಗೆ ಹೋಗಿ ಉತ್ಸವಮೂರ್ತಿಯವರೆಗೂ ತಲುಪಿತ್ತು. ಕೋತಿಯು ಉತ್ಸವ ಮೂರ್ತಿಯ ವಿಗ್ರಹಕ್ಕೆ ಏನಾದರೂ ಮಾಡೀತು ಎಂಬ ಆತಂಕದಲ್ಲಿ ಹತ್ತಿರದಲ್ಲಿದ್ದ ಭದ್ರತಾ ಸಿಬ್ಬಂದಿ ಓಡಿ ಬಂದಿದ್ದಾರೆ. ಆಗ ಕೋತಿಯು ಶಾಂತವಾಗಿಯೇ ಉತ್ತರ ದ್ವಾರದ ಕಡೆಗೆ ಓಡಿತು. ಆದರೆ ಆ ದ್ವಾರ ಮುಚ್ಚಿದ್ದರಿಂದ ಪೂರ್ವ ದಿಕ್ಕಿಗೆ ತೆರಳಿ ಭಕ್ತಾದಿಗಳ ಮಧ್ಯದಿಂದ ಹೊರಗೆ ಹೋಯಿತು. ಸ್ವಯಂ ಹನುಮಾನ್ಜೀ ರಾಮಲಲ್ಲಾನ ದರ್ಶನಕ್ಕೆ ಬಂದಿದ್ದರು ಎಂಬ ಭಾವ ತಮಗಾಯಿತು ಎಂದು ಈ ದೃಶ್ಯ ನೋಡಿದವರ ಅಭಿಪ್ರಾಯವಾಗಿತ್ತು."
ಬಸ್ ಸಂಚಾರ ಸ್ಥಗಿತ: ಪ್ರಾಣ ಪ್ರತಿಷ್ಠಾ ಸಮಾರಂಭದ ನಂತರ ರಾಮ ಮಂದಿರವನ್ನು ಸಾರ್ವಜನಿಕರಿಗೆ ತೆರೆದ ನಂತರ ದೇವಾಲಯ ಪಟ್ಟಣ ಅಯೋಧ್ಯೆಯಲ್ಲಿ ಭಾರಿ ಜನದಟ್ಟಣೆ ಉಂಟಾಗಿದೆ. ಅಯೋಧ್ಯೆಯಲ್ಲಿ ಮತ್ತಷ್ಟು ಜನಜಂಗುಳಿ ಉಂಟಾಗದಂತೆ ನಿಯಂತ್ರಿಸಲು ಲಕ್ನೋ ಮತ್ತು ಅಯೋಧ್ಯೆ ನಡುವಿನ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಪರಿಸ್ಥಿತಿ ಸಾಮಾನ್ಯವಾಗುವವರೆಗೆ ಈ ಮಾರ್ಗದಲ್ಲಿ ಯಾವುದೇ ಬಸ್ಸುಗಳು ಚಲಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.