ಕರ್ನಾಟಕ

karnataka

ETV Bharat / bharat

ಆರ್‌ಎಸ್‌ಎಸ್ ಕಾರ್ಯಕ್ರಮಗಳಲ್ಲಿ ಭಾಗವಹಿಸದಂತೆ ಸರ್ಕಾರಿ ನೌಕರರ ಮೇಲಿದ್ದ ನಿಷೇಧ ತೆಗೆದುಹಾಕಿದ ಮೋದಿ - Govt employees can part RSS events - GOVT EMPLOYEES CAN PART RSS EVENTS

1996ರಿಂದ ಜಾರಿಯಲ್ಲಿದ್ದ ನಿಷೇಧವನ್ನು ಪ್ರಧಾನಿ ಮೋದಿ ತೆಗೆದುಹಾಕಿದ್ದು, ಬಿಜೆಪಿಯ ಐಟಿ ವಿಭಾಗದ ಮುಖ್ಯಸ್ಥ ಅಮಿತ್​ ಮಾಳವಿಯಾ ಆದೇಶದ ಸ್ಕ್ರೀನ್​ ಶಾಟ್​ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (ETV Bharat)

By ETV Bharat Karnataka Team

Published : Jul 22, 2024, 3:07 PM IST

Updated : Jul 22, 2024, 3:58 PM IST

ನವದೆಹಲಿ: 1996ರಿಂದ ಜಾರಿಯಲ್ಲಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್​ಎಸ್​ಎಸ್​) ಆಯೋಜಿಸುವ ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರು ಭಾಗವಹಿಸುವುದರ ಮೇಲಿದ್ದ ನಿಷೇಧವನ್ನು ಮೋದಿ ಸರ್ಕಾರ ತೆಗೆದುಹಾಕಿದೆ.

ಬಿಜೆಪಿಯ ಐಟಿ ವಿಭಾಗದ ಮುಖ್ಯಸ್ಥ ಅಮಿತ್​ ಮಾಳವಿಯಾ ಅವರು ಆದೇಶದ ಸ್ಕ್ರೀನ್​ ಶಾಟ್​ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, 58 ವರ್ಷಗಳ ಹಿಂದೆ ನೀಡಲಾದ ಅಸಂವಿಧಾನಿಕ ನಿರ್ದೇಶನವನ್ನು ಮೋದಿ ಸರ್ಕಾರ ಹಿಂಪಡೆದಿದೆ ಎಂದು ಬರೆದುಕೊಂಡಿದ್ದಾರೆ. ಕೇಂದ್ರ ಸರ್ಕಾರದ ಈ ಕ್ರಮವನ್ನು ಕಾಂಗ್ರೆಸ್​ ತೀವ್ರವಾಗಿ ಟೀಕಿಸಿದೆ.

ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಜೈರಾಮ್​ ರಮೇಶ್​ ಅವರು ಭಾನುವಾರ ತಮ್ಮ ಎಕ್ಸ್​ ಖಾತೆಯಲ್ಲಿ, ಜುಲೈ 9 ರಂದು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯ ಆರ್​ಎಸ್​ಎಸ್​ನ ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರ ಭಾಗವಹಿಸುವಿಕೆಗೆ ಸಂಬಂಧಿಸಿದಂತೆ ಹೊರಡಿಸಿದ ಮೆಮೊರಂಡಮ್​ ಅನ್ನು ಹಂಚಿಕೊಂಡಿದ್ದರು. ಒಂದು ದಿನದ ನಂತರ, ಕೇಂದ್ರದ ಈ ನಿರ್ಧಾರದ ಬಗ್ಗೆ ಪರ ಹಾಗೂ ವಿರೋಧ ಪ್ರತಿಕ್ರಿಯೆಗಳು ಬರಲಾರಂಭಿಸಿವೆ.

ಆದೇಶದ ಚಿತ್ರ ಸಹಿತ ಎಕ್ಸ್​ ಪೋಸ್ಟ್​ನಲ್ಲಿ ಹಂಚಿಕೊಂಡಿರುವ ಜೈರಾಮ್​ ರಮೇಶ್​ ಅವರು, "ಗಾಂಧೀಜಿ ಹತ್ಯೆಯ ನಂತರ 1948ರ ಫೆಬ್ರವರಿಯಲ್ಲಿ ಸರ್ದಾರ್ ಪಟೇಲ್ ಅವರು ಆರ್‌ಎಸ್‌ಎಸ್ ಅನ್ನು ನಿಷೇಧಿಸಿದ್ದರು. ನಂತರ, ಉತ್ತಮ ನಡವಳಿಕೆಯ ಭರವಸೆಯ ಮೇರೆಗೆ ನಿಷೇಧವನ್ನು ಹಿಂತೆಗೆದುಕೊಳ್ಳಲಾಗಿತ್ತು. ಆದರೆ ಇದಾದ ನಂತರವೂ ಆರ್‌ಎಸ್‌ಎಸ್ ಎಂದಿಗೂ ನಾಗ್ಪುರದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿರಲಿಲ್ಲ. 1966 ರಲ್ಲಿ, ಆರ್​ಎಸ್​ಎಸ್​ ಚಟುವಟಿಕೆಗಳಲ್ಲಿ ಭಾಗವಹಿಸುವ ಸರ್ಕಾರಿ ನೌಕರರ ಮೇಲೆ ನಿಷೇಧ ಹೇರಲಾಯಿತು. ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗಲೂ ಜಾರಿಯಲ್ಲಿದ್ದ, 58 ವರ್ಷಗಳ ನಿಷೇಧವನ್ನು ಪ್ರಧಾನಿ ಮೋದಿ ಸರ್ಕಾರ 2024ರ ಜುಲೈ 9 ರಂದು ತೆಗೆದುಹಾಕಿದೆ" ಆರೋಪಿಸಿದರು.

ಆರ್​ಎಸ್​ಎಸ್​ ಶ್ಲಾಘನೆ: ನಿಷೇಧವನ್ನು ಹಿಂಪಡೆದಿರುವ ಕೇಂದ್ರ ಸರ್ಕಾರದ ಕ್ರಮವನ್ನು ಆರ್​ಎಸ್​ಎಸ್​ ಶ್ಲಾಘಿಸಿದೆ. ಆರ್​ಎಸ್​ಎಸ್​ ವಕ್ತಾರ ಸುನೀಲ್ ಅಂಬೇಕರ್, "ಸರ್ಕಾರದ ಪ್ರಸ್ತುತ ನಿರ್ಧಾರ ಸೂಕ್ತವಾಗಿದ್ದು, ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುತ್ತದೆ. ರಾಷ್ಟ್ರೀಯ ಸ್ವಯಂಸೇವಕ ಸಂಘವು ಕಳೆದ 99 ವರ್ಷಗಳಿಂದ ರಾಷ್ಟ್ರದ ಪುನರ್ನಿರ್ಮಾಣ ಮತ್ತು ಸಮಾಜ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ. ತನ್ನ ರಾಜಕೀಯ ಹಿತಾಸಕ್ತಿಗಳಿಂದಾಗಿ ಅಂದಿನ ಸರ್ಕಾರವು ಸರ್ಕಾರಿ ನೌಕರರನ್ನು ಸಂಘದಂತಹ ರಚನಾತ್ಮಕ ಸಂಘಟನೆಯ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಆಧಾರರಹಿತವಾಗಿ ನಿಷೇಧಿಸಿತ್ತು" ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿರೋಧ ಪಕ್ಷಗಳಿಂದ ಟೀಕೆ: ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧ ಪಕ್ಷಗಳು ಕಟುವಾಗಿ ಟೀಕಿಸಿದ್ದು, ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಸೋಮವಾರ ತಮ್ಮ ಎಕ್ಸ್​ ಪೋಸ್ಟ್​ನಲ್ಲಿ ಕೇಂದ್ರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

"ಪ್ರಧಾನಿ ನರೇಂದ್ರ ಮೋದಿ ಅವರು ಸೈದ್ಧಾಂತಿಕ ಆಧಾರದ ಮೇಲೆ ಸರ್ಕಾರಿ ನೌಕರರನ್ನು ರಾಜಕೀಯಗೊಳಿಸಲು ಬಯಸುತ್ತಿದ್ದಾರೆ. 1947ರ ಈ ದಿನದಂದು ಭಾರತವು ತನ್ನ ರಾಷ್ಟ್ರೀಯ ಧ್ವಜವನ್ನು ಅಳವಡಿಸಕೊಂಡಿತು. ಆದರೆ ಆರ್​ಎಸ್​ಎಸ್​ ತ್ರಿವರ್ಣ ಧ್ವಜವನ್ನು ವಿರೋಧಿಸಿತ್ತು. ಸರ್ದಾರ್​ ಪಟೇಲ್​ ಅವರು ಈ ಬಗ್ಗೆ ಅವರಿಗೆ ಎಚ್ಚರಿಕೆ ನೀಡಿದ್ದರು. 1948 ಫೆಬ್ರುವರಿ 4ರಂದು ಗಾಂಧೀಜಿ ಹತ್ಯೆಯ ನಂತರ ಸರ್ದಾರ್​ ವಲ್ಲಭಬಾಯ್​ ಪಟೇಲ್​ ಅವರು ಆರ್​ಎಸ್​ಎಸ್​ ಅನ್ನು ನಿಷೇಧಿಸಿದ್ದರು. ಪ್ರಧಾನಿ ಮೋದಿ ಅವರು 58 ವರ್ಷಗಳ ಬಳಿಕ ಸರ್ಕಾರಿ ನೌಕರರು ಆರ್​ಎಸ್​ಎಸ್​ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಹೇರಿದ್ದ ನಿಷೇಧವನ್ನು ತೆಗೆದುಹಾಕುವ ಮೂಲಕ ಸರ್ಕಾರಿ ಕಚೇರಿಗಳು ಹಾಗೂ ಉದ್ಯೋಗಿಗಳನ್ನು ಸೈದ್ಧಾಂತಿಕ ಆಧಾರದ ಮೇಲೆ ರಾಜಕೀಯ ಮಾಡಲು ಬಯಸುತ್ತಿದ್ದಾರೆ" ಎಂದು ಆರೋಪಿಸಿದ್ದಾರೆ.

"ಇದು ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ನೌಕರರ ತಟಸ್ಥ ಭಾವನೆ ಮತ್ತು ಪರಮಾಧಿಕಾರಕ್ಕೆ ಸವಾಲಾಗಲಿದೆ. ಸಂವಿಧಾನವನ್ನು ಬದಲಾಯಿಸುವ ಕೆಟ್ಟ ಉದ್ದೇಶಕ್ಕಾಗಿ ಅವರನ್ನು ಜನರು ಸೋಲಿಸಿದ ಕಾರಣ, ಬಹುಶಃ ಈ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ" ಎಂದು ಆರೋಪಿಸಿದರು.

"ಮೋದಿ ಸರ್ಕಾರ ಸಾಂವಿಧಾನಿಕ ಸಂಸ್ಥೆಗಳ ಮೇಲೆ ನಿಯಂತ್ರಣ ಸಾಧಿಸಲು ಹಾಗೂ ಹಿಂಬಾಗಿಲಿನ ಮೂಲಕ ತಮ್ಮ ಬೇಕಾದಂತೆ ಕೆಲಸಗಳನ್ನು ಮಾಡಿಸಿಕೊಳ್ಳಲು ಮತ್ತು ಸಂವಿಧಾನವನ್ನು ಹಾಳುಮಾಡುವ ತನ್ನ ಪ್ರಯತ್ನಗಳನ್ನು ಮುಂದುವರಿಸಿದೆ" ಎಂದು ಖರ್ಗೆ ದೂರಿದರು.

ಇದನ್ನೂ ಓದಿ:2029ರವರೆಗೆ ಪಕ್ಷ ರಾಜಕಾರಣ ಬಿಟ್ಟು ದೇಶಕ್ಕಾಗಿ ದುಡಿಯಿರಿ: ಸಂಸದರಿಗೆ ಪ್ರಧಾನಿ ಮೋದಿ ಕರೆ - PM Modi

Last Updated : Jul 22, 2024, 3:58 PM IST

ABOUT THE AUTHOR

...view details