ಖಜುರಾಹೊ(ಮಧ್ಯ ಪ್ರದೇಶ):ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ನದಿ ಜೋಡಣೆಯ ಮೊದಲ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಧ್ಯ ಪ್ರದೇಶದ ಖುಜುರಾಹೊದಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ಮಧ್ಯ ಪ್ರದೇಶದಲ್ಲಿ ಹುಟ್ಟುವ ಎರಡು ನದಿಗಳಾದ ಕೆನ್ ಮತ್ತು ಬೆಟ್ವಾ ನದಿಗಳನ್ನು ಜೋಡಿಸಿ, ಅದರ ನೀರನ್ನು ಮಧ್ಯ ಪ್ರದೇಶ ಮತ್ತು ಉತ್ತರ ಪ್ರದೇಶದ ಜನರಿಗೆ ನೀಡುವುದು ಯೋಜನೆಯ ಉದ್ದೇಶ. ಈ ಮೂಲಕ ಅತಿದೊಡ್ಡ ಸಾಹಸಕ್ಕೆ ಸರ್ಕಾರ ನಾಂದಿ ಹಾಡಿದೆ.
ಕೆನ್-ಬೆಟ್ವಾ ನದಿಗಳ ನೀರನ್ನು ಒಟ್ಟಾಗಿ ಸುರಿಯುವ ಮೂಲಕ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, "ದೇಶದ ಜಲಸಂಪನ್ಮೂಲ ಅಭಿವೃದ್ಧಿಗೆ ಡಾ.ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆ ಮಹತ್ವದ್ದಾಗಿದೆ. ಇದನ್ನು ಕಾಂಗ್ರೆಸ್ ಸರ್ಕಾರಗಳು ಕಡೆಗಣಿಸಿದ್ದವು" ಎಂದು ಆರೋಪಿಸಿದರು.
"ದೇಶದ ಜಲ ಸಂಪನ್ಮೂಲಗಳ ಬಗ್ಗೆ ಅಂಬೇಡ್ಕರ್‌ಗೆ ದೂರದೃಷ್ಟಿ ಇತ್ತು": "21ನೇ ಶತಮಾನದ ಈ ಯುಗದಲ್ಲಿ ಜಲ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ರಾಷ್ಟ್ರಗಳು ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ. ದೇಶದ ಜಲ ಸಂಪನ್ಮೂಲಗಳ ಬಗ್ಗೆ ಅಂಬೇಡ್ಕರ್ ಅವರು ದೂರದೃಷ್ಟಿ ಹೊಂದಿದ್ದರು. ಅವುಗಳ ಬಲವರ್ಧನೆ, ನಿರ್ವಹಣೆ ಮತ್ತು ಅಣೆಕಟ್ಟು ನಿರ್ಮಾಣಕ್ಕೆ ಗಣನೀಯ ಕೊಡುಗೆ ನೀಡಿದ್ದಾರೆ" ಎಂದು ಮೋದಿ ಬಣ್ಣಿಸಿದರು.
"ಪ್ರಮುಖ ನದಿ ಕಣಿವೆ ಯೋಜನೆಗಳ ಅಭಿವೃದ್ಧಿ ಮತ್ತು ಕೇಂದ್ರ ಜಲ ಆಯೋಗದ ರಚನೆಯಲ್ಲಿ ಅಂಬೇಡ್ಕರ್ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಆದರೆ, ಕಾಂಗ್ರೆಸ್ ನೀರಿನ ಸಂರಕ್ಷಣೆಯ ಬಗ್ಗೆ ಎಂದಿಗೂ ಗಮನ ನೀಡಲಿಲ್ಲ. ಅಂಬೇಡ್ಕರ್ ಅವರನ್ನು 'ಜಲ ಸಂರಕ್ಷಣಾವಾದಿ'ಯಾಗಿ ಗುರುತಿಸಲಿಲ್ಲ" ಎಂದು ಟೀಕಿಸಿದರು.
ಯೋಜನೆಯ ಬಗ್ಗೆ ಒಂದಿಷ್ಟು..:ಅತೀ ಮಹತ್ವದ ಕೆನ್-ಬೆಟ್ವಾ ನದಿಗಳ ಜೋಡಣೆ ಯೋಜನೆಯು ಎರಡು ರಾಜ್ಯಗಳ ಜನರ ನೀರಿನ ಬವಣೆಗೆ ಪರಿಹಾರ ನೀಡಲಿದೆ. ಮಧ್ಯ ಪ್ರದೇಶದ 10 ಜಿಲ್ಲೆಗಳ ಸುಮಾರು 44 ಲಕ್ಷ ಮತ್ತು ಉತ್ತರ ಪ್ರದೇಶದ 4 ಜಿಲ್ಲೆಗಳ 21 ಲಕ್ಷ ಜನರಿಗೆ ಕುಡಿಯುವ ನೀರು ಒದಗಿಸಲಿದೆ. ಇದರ ಅಂದಾಜು ವೆಚ್ಚ 44,605 ಕೋಟಿ ರೂಪಾಯಿ ಆಗಿದೆ.
ಈ ಯೋಜನೆಯಿಂದ 2 ಸಾವಿರ ಗ್ರಾಮಗಳ ಸುಮಾರು 7.18 ಲಕ್ಷ ಕೃಷಿ ಕುಟುಂಬಗಳ, 10 ಲಕ್ಷ ಹೆಕ್ಟೇರ್ ಭೂಮಿಗೆ ನೀರು ಸಿಗಲಿದೆ. ಜೊತೆಗೆ, 103 ಮೆಗಾವ್ಯಾಟ್ ಜಲವಿದ್ಯುತ್ ಮತ್ತು 27 ಮೆಗಾವ್ಯಾಟ್ ಸೌರಶಕ್ತಿಯೂ ಯೋಜನೆಯಡಿ ಉತ್ಪಾದನೆಯಾಗಲಿದೆ. ಶೇಕಡಾ 90 ರಷ್ಟು ಅನುದಾನವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಯೋಜನೆಯ ರೂಪುರೇಷೆ ಹೀಗಿದೆ:ಕೆನ್ ನದಿಗೆ ಅಡ್ಡಲಾಗಿ ಪನ್ನಾ ಹುಲಿ ಸಂರಕ್ಷಿತಾರಣ್ಯದಲ್ಲಿ 77 ಮೀಟರ್ ಎತ್ತರ ಮತ್ತು 2.13 ಕಿಲೋ ಮೀಟರ್ ಉದ್ದದ ದೌಧನ್ ಅಣೆಕಟ್ಟು ನಿರ್ಮಾಣ ಮಾಡಲಾಗುತ್ತದೆ. ಇದಕ್ಕೆ ಹೊಂದಿಕೊಂಡಂತೆ 221 ಕಿ.ಮೀ. ಉದ್ದದ ಕಾಲುವೆಯನ್ನು ರೂಪಿಸಲಾಗುತ್ತದೆ. ಇದರ ಮೂಲಕ ಉತ್ತರಪ್ರದೇಶದಲ್ಲಿ ಹರಿಯುವ ಬೆಟ್ವಾ ನದಿಗೆ ಕೆನ್ ನದಿಯ ನೀರನ್ನು ಹರಿಸಲಾಗುತ್ತದೆ. ಈ ಕಾಲುವೆ ಪರಿಧಿಯಲ್ಲಿ ಬರುವ ಬುಂದೇಲಖಂಡದ ಜನರಿಗೆ ಕುಡಿಯಲು ಮತ್ತು ಕೃಷಿಗೆ ನೀರು ದೊರೆಯಲಿದೆ.
ಇದನ್ನೂ ಓದಿ:ಸಿಎಂ ಅತಿಶಿ ಬಂಧಿಸಲು ಬಿಜೆಪಿ ಪಿತೂರಿ: ಅರವಿಂದ್ ಕೇಜ್ರಿವಾಲ್