ನವದೆಹಲಿ:ದೆಹಲಿ ಬಿಜೆಪಿ ಘಟಕವು ಮಂಗಳವಾರ ಹೊಸ ಪ್ರಚಾರ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದು, ಅಧಿಕಾರಕ್ಕೆ ಬಂದರೆ ಭರವಸೆಗಳನ್ನು ಈಡೇರಿಸುವ ಬದ್ಧತೆಯನ್ನು ಪೋಸ್ಟರ್ನಲ್ಲಿ ಒತ್ತಿಹೇಳಿದೆ. ಪೋಸ್ಟರ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಚಿತ್ರವಿದ್ದು, "ಮೋದಿ ಕಿ ಗ್ಯಾರಂಟಿ ಕಾ ಮತಲಬ್ ಹೈ ಹರ್ ಗ್ಯಾರಂಟಿ ಪೂರಾ ಹೋನೆ ಕಿ ಗ್ಯಾರಂಟಿ (ಮೋದಿಯವರ ಗ್ಯಾರಂಟಿ ಎಂದರೆ ಪ್ರತಿ ಭರವಸೆಯನ್ನು ಈಡೇರಿಸುವ ಖಾತರಿ)" ಎಂದು ಬರೆಯಲಾಗಿದೆ.
ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟರ್ ಅನ್ನು ಶೇರ್ ಮಾಡಿರುವ ಬಿಜೆಪಿ, ಈ ಬಾರಿಯ ಚುನಾವಣೆಗಾಗಿ ತನ್ನ ದೃಷ್ಟಿಕೋನವನ್ನು ವಿವರಿಸಿದ್ದು, ಹಲವಾರು ಯೋಜನೆಗಳನ್ನು ಜಾರಿ ಮಾಡುವ ಬಗ್ಗೆ ಭರವಸೆ ನೀಡಿದೆ. ಇದರಲ್ಲಿ ಮಹಿಳೆಯರಿಗೆ ತಿಂಗಳಿಗೆ 2,500 ರೂ.ಗಳ ಆರ್ಥಿಕ ನೆರವು, ಹೋಳಿ ಮತ್ತು ದೀಪಾವಳಿಯ ಸಮಯದಲ್ಲಿ 500 ರೂ.ಗೆ ಕೈಗೆಟುಕುವ ದರದಲ್ಲಿ ಎಲ್ಪಿಜಿ ಸಿಲಿಂಡರ್ಗಳು ಮತ್ತು ಗರ್ಭಿಣಿಯರಿಗೆ 21,000 ರೂ.ಗಳ ಜೊತೆಗೆ ಆರು ಪೌಷ್ಠಿಕಾಂಶದ ಕಿಟ್ ನೀಡುವುದು ಸೇರಿವೆ.
ಕೊಳೆಗೇರಿ ನಿವಾಸಿಗಳಿಗೆ 5 ರೂ.ಗೆ ಪೌಷ್ಟಿಕ ಆಹಾರ, ಆಯುಷ್ಮಾನ್ ಭಾರತ್ ಯೋಜನೆಯಡಿ 10 ಲಕ್ಷ ರೂ.ಗಳ ಉಚಿತ ಚಿಕಿತ್ಸೆ ಮತ್ತು 70 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಉಚಿತ ಒಪಿಡಿ ಸೇವೆಗಳನ್ನು ನೀಡುವುದಾಗಿ ಪಕ್ಷ ಭರವಸೆ ನೀಡಿದೆ. ಹಿರಿಯ ನಾಗರಿಕರಿಗೆ 2,500 ರೂ., ವಿಧವೆಯರು ಮತ್ತು 70 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧರಿಗೆ 3,000 ರೂ. ನೀಡುವುದಾಗಿಯೂ ಪಕ್ಷ ಆಶ್ವಾಸನೆ ನೀಡಿದೆ. ಸದ್ಯ ಅಸ್ತಿತ್ವದಲ್ಲಿರುವ ಕಲ್ಯಾಣ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗುವುದಾಗಿ ಮತ್ತು ಈ ಯೋಜನೆಗಳಲ್ಲಿನ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವುದಾಗಿ ಅದು ಹೇಳಿದೆ.