ನವದೆಹಲಿ:ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಬಿಜೆಪಿ ಪಕ್ಷ 370-ಪ್ಲಸ್ ಮತ್ತು ಒಟ್ಟಾರೆ ಎನ್ಡಿಎ 400 ಸ್ಥಾನಗಳಲ್ಲಿ ಗೆಲ್ಲಲು ಬಿಜೆಪಿ ಪ್ಲಾನ್ ಹಾಕಿಕೊಂಡಿದೆ. ಈ ಬಾರಿಯೂ ಮೋದಿ ಅವರನ್ನೇ ಪ್ರಧಾನಿಯಾಗಿ ಮುಂದುವರೆಸುವ ಉದ್ದೇಶದಿಂದ ಬಿಜೆಪಿ ಮಿಷನ್ 2024 ಹಮ್ಮಿಕೊಂಡಿದ್ದು, ಗುರಿ ಸಾಧಿಸಲು ಮುಂದಾಗಿದೆ.
ಅಷ್ಟಕ್ಕೂ ಏನಿದು ಗ್ಯಾನ್: ಗ್ಯಾನ್ ಎಂದರೆ 'ಗರೀಬ್' (ಬಡವರು), ಯುವ (ಯುವಕರು), ಅನ್ನದಾತ (ರೈತರು) ಮತ್ತು ನಾರಿ (ಮಹಿಳೆಯರು) ಎಂಬುದಾಗಿದೆ. ಬಡವರು, ಯುವ ಸಮುದಾಯ, ರೈತರು ಮತ್ತು ಮಹಿಳೆಯರನ್ನು ಹೆಚ್ಚೆಚ್ಚು ಮನವೊಲಿಸಿ ಅವರನ್ನ ಪಕ್ಷದತ್ತ ಸೆಳೆಯುವುದು ಹಾಗೂ ಈ ನಾಲ್ಕೂ ಅಂಶಗಳ ಮೇಲೆಯೇ ಹೆಚ್ಚಿನ ಒತ್ತು ನೀಡಿ ಯೋಜನೆ ಜಾರಿ ಹಾಗೂ ಪ್ರಚಾರವನ್ನು ಮಾಡುವುದು ಬಿಜೆಪಿಯ ಮೆಗಾ ಪ್ಲಾನ್ ಆಗಿದೆ.
ಇದೇ ಅಂಶಗಳ ಮೇಲೆ ನಡೆದಿತ್ತು ಪಂಚರಾಜ್ಯ ಚುನಾವಣೆ: ಪಂಚರಾಜ್ಯಗಳ ಚುನಾವಣೆಯಲ್ಲಿ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ಗಢದಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿತ್ತು. ಈ ರಾಜ್ಯಗಳಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮೋದಿ ಅವರು, ಬಡವರು, ಯುವಕರು, ರೈತರು ಮತ್ತು ಮಹಿಳೆಯರಿಗೆ ಸಂಬಂಧಿಸಿದಂತೆ ತಮ್ಮ ಭಾಷಣಗಳಲ್ಲಿ ಹೆಚ್ಚು ಮಾತನಾಡಿದ್ದರು. ಯುವಕರು ಮತ್ತು ಮಹಿಳೆಯರಿಗೆ ಉದ್ಯೋಗ ಹಾಗೂ ಕಲ್ಯಾಣಗಳ ಬಗ್ಗೆ ವಾಗ್ದಾನ ಮಾಡಿದ್ದರು. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಈ ನಾಲ್ಕು ಅಂಶಗಳ ಮೇಲೆಯೇ ಬಿಜೆಪಿ ಕೇಂದ್ರೀಕರಿಸಲು ನಿರ್ಧರಿಸಿದ್ದು, ಈ ಆಧಾರದ ಮೇಲೆಯೇ ತನ್ನ ಕಾರ್ಯತಂತ್ರ ರೂಪಿಸುತ್ತಿದೆ.
ಮೆಗಾ ಪ್ರಚಾರಕ್ಕೆ ಮಹಾ ಪ್ಲಾನ್: ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಈ ನಾಲ್ಕು ವರ್ಗಗಳ ಮೇಲೆ ಕೇಂದ್ರೀಕರಿಸಿ ಈ ಬಾರಿ ವ್ಯಾಪಕ ಪ್ರಚಾರ ನಡೆಸಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದು, ಚುನಾವಣಾ ಪೂರ್ವದಲ್ಲಿ ಈ ವರ್ಗಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆ. ಮಿಷನ್ ಜ್ಞಾನ್ ಮುನ್ನಡೆಸುವ ಮತ್ತು ಗುರಿ ಸಾಧಿಸುವ ಕಾರ್ಯವನ್ನು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುನಿಲ್ ಬನ್ಸಾಲ್, ಉಪಾಧ್ಯಕ್ಷ ಬಿಜಯಂತ್ (ಜೈ) ಪಾಂಡಾ, ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಮತ್ತು ಶಿವಪ್ರಕಾಶ್ ಸೇರಿದಂತೆ ಬಿಜೆಪಿಯ ಪ್ರಮುಖರು ಮತ್ತು ವರಿಷ್ಠರಿಗೆ ನೀಡಲಾಗಿದೆ ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.
ಪಶ್ಚಿಮ ಬಂಗಾಳದಲ್ಲಿ ಮೋದಿ ರಣತಂತ್ರ:ಪ್ರಧಾನಿ ಮೋದಿಯವರು ಈ ಬಾರಿ ಪಶ್ಚಿಮ ಬಂಗಾಳದ ಮೇಲೆಯೂ ಹೆಚ್ಚಿನ ಗಮನ ಹರಿಸಿದ್ದಾರೆ. ಕಳೆದ ಬಾರಿ ಬಂಗಾಳದ 42 ಸ್ಥಾನಗಳಲ್ಲಿ 18 ಕ್ಷೇತ್ರಗಳಲ್ಲಿ ಬಿಜೆಪಿ ಜಯ ಸಾಧಿಸಿತ್ತು. ಈ ಬಾರಿ ಈ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಪಣ ತೊಟ್ಟಿದೆ. ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಪಶ್ಚಿಮ ಬಂಗಾಳದಿಂದ, ದೇಶದ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಇದು ಎಂದು ನಡೆಯುತ್ತದೆ ಎಂಬ ಬಗ್ಗೆ ಪಕ್ಷ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ.
ದೇಶಾದ್ಯಂತ ಮಹಿಳಾ ಮತದಾರರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾಡುವ ಭಾಷಣದ ಸ್ಥಳವೂ ಮಹತ್ವದ್ದಾಗಿದೆ. ಏಕೆಂದರೆ ಕಳೆದ ಹಲವು ವಾರಗಳಿಂದ ಪಶ್ಚಿಮ ಬಂಗಾಳ ಸಂದೇಶ್ ಖಾಲಿ ಘಟನೆ ಭಾರಿ ಸದ್ದು ಮಾಡುತ್ತಿದೆ. ನೂರಾರು ಮಹಿಳೆಯರು ಆಡಳಿತಾರೂಢ ಟಿಎಂಸಿ ವಿರುದ್ಧ ಆಕ್ರೋಶಗೊಂಡಿದ್ದು, ಪ್ರತಿಭಟನೆ ಮಾಡುತ್ತಿದ್ದಾರೆ. ಈ ಘಟನೆಯ ಪ್ರಮುಖ ರೂವಾರಿ, ಟಿಎಂಸಿಯ ಶೇಖ್ ಷಹಜಹಾನ್ ಪರಾರಿಯಾಗಿದ್ದಾರೆ ಎಂದು ಅಲ್ಲಿನ ಜನ ಆರೋಪಿಸುತ್ತಿದ್ದಾರೆ.