ಹೈದರಾಬಾದ್:ಕರ್ನಾಟಕದಲ್ಲಿ ಖಾಸಗಿ ಕಂಪನಿಗಳ ಹುದ್ದೆಗಳಲ್ಲಿ ಸ್ಥಳೀಯರಿಗೆ ಶೇಕಡಾ 100 ರಷ್ಟು ಮೀಸಲಾತಿ ನೀಡಬೇಕು ಎಂಬ ವಿಧೇಯಕವನ್ನು ಪ್ರಸ್ತಾಪಿಸಿದ ಬೆನ್ನಲ್ಲೇ, ನೆರೆಹೊರೆಯ ರಾಜ್ಯಗಳು ಅಲ್ಲಿನ ಕಂಪನಿಗಳನ್ನು ಸೆಳೆಯಲು ಮುಂದಾಗಿವೆ. ತಮ್ಮ ರಾಜ್ಯದಲ್ಲಿ ಕಂಪನಿಗಳನ್ನು ಮುಂದುವರಿಸಲು ಆಹ್ವಾನಿಸುತ್ತಿವೆ.
ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರ ಪುತ್ರ, ಸಚಿವ ನಾರಾ ಲೋಕೇಶ್ ಅವರು ನಾಸ್ಕಾಮ್ಗೆ ತಮ್ಮ ರಾಜ್ಯಕ್ಕೆ ಬರಲು ವಿಶೇಷ ಆಹ್ವಾನ ನೀಡಿದ್ದಾರೆ. ಕಂಪನಿಯ ಆಕ್ಷೇಪವನ್ನು ತಮ್ಮ ಸರ್ಕಾರ ಅರ್ಥ ಮಾಡಿಕೊಂಡಿದೆ. ಆಂಧ್ರದಲ್ಲಿ ಐಟಿ ಸೇವೆಗಳನ್ನು ವಿಸ್ತರಿಸಬಹುದು ಎಂದು ಕಂಪನಿಗೆ ತಿಳಿಸಿದ್ದಾರೆ.
ನಮ್ಮಲ್ಲಿ ನಿರ್ಬಂಧವಿಲ್ಲ, ಹೂಡಿಕೆ ಮಾಡಿ:ಕರ್ನಾಟಕ ಸರ್ಕಾರದ ಮೀಸಲಾತಿ ಪ್ರಸ್ತಾಪಕ್ಕೆ ನ್ಯಾಷನಲ್ ಅಸೋಸಿಯೇಷನ್ ಆಫ್ ಸಾಫ್ಟ್‌ವೇರ್ ಅಂಡ್ ಸರ್ವೀಸ್ ಕಂಪನಿಯು(ನಾಸ್ಕಾಮ್) ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಎಕ್ಸ್ ಖಾತೆಯಲ್ಲಿನ ಪತ್ರಕ್ಕೆ ಪ್ರತಿಕ್ರಿಯಿಸಿರುವ ಸಚಿವ ನಾರಾ ಲೋಕೇಶ್, ತಮ್ಮ ಕಂಪನಿಯನ್ನು ಸ್ವಾಗತಿಸಲು ಆಂಧ್ರಪ್ರದೇಶ ಸರ್ಕಾರ ಸಿದ್ಧವಿದೆ. ಕರ್ನಾಟಕ ಸರ್ಕಾರ ಪರಿಚಯಿಸಿದ ಕೈಗಾರಿಕೆಗಳ ವಿಧೇಯಕದ ಬಗ್ಗೆ ಇರುವ ಅಸಮಾಧಾನವನ್ನು ನಮ್ಮ ಸರ್ಕಾರ ಅರ್ಥಮಾಡಿಕೊಂಡಿದೆ. ಇಲ್ಲಿ ತಮ್ಮ ಐಟಿ ಸೇವೆಗಳನ್ನು ವಿಸ್ತರಿಸಬಹುದು ಎಂದು ರತ್ನಗಂಬಳಿ ಹಾಸಿದ್ದಾರೆ.
ರಾಜ್ಯದಲ್ಲಿ ಐಟಿ ಸೇವೆ ವಿಸ್ತರಣೆಗೆ ಹೆಚ್ಚಿನ ಅವಕಾಶಗಳಿವೆ. ಇಲ್ಲಿ ಯಾವುದೇ ನಿರ್ಬಂಧಗಳು ಮತ್ತು ನಿಯಮಗಳಿಲ್ಲ. ಮುಕ್ತವಾಗಿ ಹೂಡಿಕೆ ಮಾಡಬಹುದು. ವಿಶಾಖಪಟ್ಟಣವು ಐಟಿ, ಐಟಿ ಸೇವೆಗಳು, ಕೃತಕ ಬುದ್ಧಿಮತ್ತೆ, ಡೇಟಾ ಸೆಂಟರ್ ಕ್ಲಸ್ಟರ್ನಂತಹ ವ್ಯವಹಾರಗಳಿಗೆ ಅನುಕೂಲಕರವಾಗಿದೆ. ಇಲ್ಲಿಗೆ ತಮ್ಮ ವ್ಯವಹಾರಗಳನ್ನು ವರ್ಗಾಯಿಸಬಹುದು ಅಥವಾ ವಿಸ್ತರಿಸಬಹುದು ಎಂದು ಸಚಿವರು ಹೇಳಿದ್ದಾರೆ.