ನಂದೂರ್‌ಬಾರ್ (ಮಹಾರಾಷ್ಟ್ರ):ಉದ್ದವ್ ಠಾಕ್ರೆ ಬಣದ ಶಿವಸೇನೆಯನ್ನು ‘ನಕಲಿ ಶಿವಸೇನೆ’ ಎಂದು ಲೇವಡಿ ಮಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಎನ್‌ಸಿಪಿ ನಾಯಕ ಶರದ್ ಪವಾರ್‌ಗೆ ಎನ್ಡಿಎ ಮೈತ್ರಿ ಸೇರಿಕೊಳ್ಳುವಂತೆ ಆಫರ್ ನೀಡಿದರು. ಮಹಾರಾಷ್ಟ್ರದ ನಂದೂರ್ಬಾರ್‌ನಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸುವ ವೇಳೆ ಈ ವಿಚಾರ ಪ್ರಸ್ತಾಪ ಮಾಡಿದ ಪ್ರಧಾನಿ ಮೋದಿ, ನೀವು ಕಾಂಗ್ರೆಸ್ ಜೊತೆ ಸೇರಿ ಮುಳುಗುವುದಕ್ಕಿಂತ ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್ ಅವರೊಂದಿಗೆ ಸೇರಿಕೊಳ್ಳಿ ಎಂದು ಶರದ್ ಪವಾರ್‌ಗೆ ಆಫರ್ ನೀಡಿದರು.
ಕಳೆದ 40-50 ವರ್ಷಗಳಿಂದ ಸಕ್ರಿಯವಾಗಿರುವ ಇಲ್ಲಿನ ದೊಡ್ಡ ನಾಯಕರೊಬ್ಬರು ಬಾರಾಮತಿ ಲೋಕಸಭಾ ಸ್ಥಾನದ ಚುನಾವಣೆ ನಂತರ ಚಿಂತಿತರಾಗಿದ್ದಾರೆ. ಜೂನ್ 4ರ ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ನಕಲಿ ಎನ್‌ಸಿಪಿ ಮತ್ತು ಶಿವಸೇನೆ ಕಾಂಗ್ರೆಸ್‌ನೊಂದಿಗೆ ವಿಲೀನಗೊಳ್ಳಲು ಮನಸ್ಸು ಮಾಡಿದ್ದಾರೆ. ಚುನಾವಣೆ ಬಳಿಕ ಸಣ್ಣ ಪಕ್ಷಗಳು ಕಾಂಗ್ರೆಸ್ ಪಕ್ಷದಲ್ಲಿ ವಿಲೀನವಾಗುವ ಸಾಧ್ಯತೆ ಇದೆ ಎಂದು ಶರದ್ ಪವಾರ್ ಕೂಡ ಭವಿಷ್ಯ ನುಡಿದಿದ್ದಾರೆ. ಕಾಂಗ್ರೆಸ್ ಜೊತೆ ವಿಲೀನವಾಗುವ ಬದಲು ಅಜಿತ್ ಪವಾರ್ ಮತ್ತು ಏಕನಾಥ್ ಶಿಂಧೆ ಜೊತೆ ಸೇರಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪರೋಕ್ಷವಾಗಿ ಶರದ್ ಪವಾರ್ ಆಫರ್ ನೀಡಿದರು.
ಈ ಬಗ್ಗೆ ಸ್ವತಃ ಶರದ್ ಪವಾರ್ ಪುಣೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಮೂರು ಹಂತದ ಚುನಾವಣೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಅಸಲಿ ಬಣ್ಣ ದೇಶದ ಜನರ ಮುಂದೆ ಬಯಲಾಗಿದೆ. ಹಾಗಾಗಿ ಅವರೇ ಇಂತಹ ಆಫರ್ ಕೊಟ್ಟಿರಬೇಕು. ಆದರೆ, ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದವರ ಜೊತೆ ನಾನು ಯಾವತ್ತೂ ಸೇರುವುದಿಲ್ಲ ಎಂದಿದ್ದಾರೆ.