ಮಂಗಳೂರು: ತನ್ನ ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ಹತ್ಯೆಗೈದು ಬಳಿಕ ಪತ್ನಿಯ ಕೊಲೆಗೆ ಯತ್ನಿಸಿದ್ದ ಅಪರಾಧಿಗೆ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಲಯ ಗಲ್ಲುಶಿಕ್ಷೆ ವಿಧಿಸಿದೆ. ಮುಲ್ಕಿಯ ತತಾಳಿಪಾಡಿ ಗ್ರಾಮದ ಪದ್ಮನೂರು ಶೆಟ್ಟಿಕಾಡು ನಿವಾಸಿ ಹಿತೇಶ್ ಶೆಟ್ಟಿಗಾರ್ ಅಲಿಯಾಸ್ ಹಿತೇಶ್ ಕುಮಾರ್ (43) ಮರಣದಂಡನೆಗೊಳಗಾದ ಅಪರಾಧಿ.
ತಾಳಿಪಾಡಿ ಗ್ರಾಮದ ಪದ್ಮನೂರು ಶೆಟ್ಟಿಕಾಡಿನಲ್ಲಿ 2022 ಜೂನ್ 23ರಂದು ಸಂಜೆ ಆರೋಪಿಯು ತನ್ನ 14, 11 ಮತ್ತು 4 ವರ್ಷದ ಮಕ್ಕಳನ್ನು ಮನೆಯ ಬಳಿ ಇರುವ ಬಾವಿಗೆ ತಳ್ಳಿ ಕೊಲೆ ಮಾಡಿದ್ದನು. ಕೆಲಸದಿಂದ ಮನೆಗೆ ಬಂದು ಮಕ್ಕಳನ್ನು ಹುಡುಕುತ್ತಿದ್ದ ಹೆಂಡತಿ ಲಕ್ಷ್ಮೀಯವರನ್ನು ಕೂಡಾ ಅದೇ ಬಾವಿಗೆ ತಳ್ಳಿ ಕೊಲ್ಲಲು ಯತ್ನಿಸಿದ್ದ.
ಆರೋಪಿಯು ತನ್ನ ಉದಾಸೀನ ಪ್ರವೃತ್ತಿಯಿಂದ ಯಾವುದೇ ಕೆಲಸಕ್ಕೆ ಹೋಗದೇ ಹೆಂಡತಿ, ಮಕ್ಕಳನ್ನು ಸಾಕಲು ಕಷ್ಟವಾಗುತ್ತದೆ ಎಂದು ಈ ಕೃತ್ಯ ಎಸಗಿದ್ದನು. ಹೆಂಡತಿ ಮಕ್ಕಳನ್ನು ಸಾಯಿಸಿದ್ದಲ್ಲಿ ತಾನು ಹೇಗೆ ಬೇಕಾದರೂ ಜೀವಿಸಬಹುದೆಂದು ಯೋಚಿಸಿ ಈ ಕೃತ್ಯ ಎಸಗಿದ್ದ.
ಬಾವಿಗೆ ಬಿದ್ದ ಮಕ್ಕಳು ಬಾವಿಯೊಳಗಿನ ಹಗ್ಗದಲ್ಲಿ ನೇತಾಡುವುದನ್ನು ನೋಡಿದ ಆರೋಪಿ ತಂದೆ ಕತ್ತಿ ತಂದು ಹಗ್ಗವನ್ನು ತುಂಡರಿಸಿದ್ದನು. ಹೆಂಡತಿಯನ್ನು ಬಾವಿಗೆ ದೂಡುವ ವೇಳೆ ಪತ್ನಿ ಈತನ ಕೈಯನ್ನು ಗಟ್ಟಿ ಹಿಡಿದ ಪರಿಣಾಮ ಈತನೂ ಬಾವಿಗೆ ಬಿದ್ದಿದ್ದ. ಬಳಿಕ ನೆರೆಹೊರೆಯವರು ಬಂದು ಇಬ್ಬರನ್ನು ಬಾವಿಯಿಂದ ಮೇಲಕ್ಕೆತ್ತಿದ್ದರು.
ಆರೋಪಿಯ ವಿರುದ್ಧ ಮಂಗಳೂರು ಮುಲ್ಕಿ ಪೊಲೀಸ್ ಠಾಣೆಯಲ್ಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮುಲ್ಕಿ ಪೊಲೀಸ್ ಠಾಣೆಯ ನಿರೀಕ್ಷಕರಾದ ಕುಸುಮಾಧರ್ ಕೆ. ಅವರು ತನಿಖೆ ಪೂರ್ಣಗೊಳಿಸಿ ಆರೋಪಿ ವಿರುದ್ಧ ಕಲಂ 302, 307 ಐಪಿಸಿ ಅಡಿಯಲ್ಲಿ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸಂಧ್ಯಾ, ಅವರು ತಪ್ಪಿತಸ್ಥನಿಗೆ ಭಾರತೀಯ ದಂಡ ಸಂಹಿತೆ ಕಲಂ 302 ರಡಿ ಅಪರಾಧಕ್ಕೆ ಮರಣದಂಡನೆ/ಗಲ್ಲು ಶಿಕ್ಷೆ ಮತ್ತು ಭಾರತೀಯ ದಂಡ ಸಂಹಿತೆ ಕಲಂ 307ರ ಅಡಿಯ ಅಪರಾಧಕ್ಕೆ 10 ವರ್ಷಗಳ ಕಾರಾಗೃಹವಾಸದ ಶಿಕ್ಷೆಯನ್ನು ವಿಧಿಸಿದ್ದಾರೆ.
ಮರಣದಂಡನೆಯನ್ನು ಹೈಕೋರ್ಟ್ ಅನುಮೋದಿಸುವವರೆಗೆ ಜಾರಿಗೊಳಿಸದಂತೆ ಜೈಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜೊತೆಗೆ ನೊಂದ ಮೃತ ತಾಯಿಯಾದ ಲಕ್ಷ್ಮೀ ಅವರಿಗೆ ಸೂಕ್ತ ಪರಿಹಾರವನ್ನು ಕಾನೂನು ಸೇವೆಗಳ ಪ್ರಾಧಿಕಾರವು ನೀಡಬೇಕೆಂದು ನ್ಯಾಯಾಲಯವು ಆದೇಶಿಸಿದೆ.
ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಮೋಹನ್ ಕುಮಾರ್ ಬಿ ಅವರು ವಾದ ಮಂಡಿಸಿದ್ದರು.
ಇದನ್ನೂ ಓದಿ: ರೈಲಿನಡಿ ತಳ್ಳಿ ಯುವತಿ ಕೊಂದಿದ್ದ ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಿದ ಚೆನ್ನೈ ಮಹಿಳಾ ಕೋರ್ಟ್