ಸತಾರಾ (ಮಹಾರಾಷ್ಟ್ರ): ಸೆಲ್ಫಿ ಗೀಳಿಗೆ ಯುವತಿಯೊಬ್ಬಳು ತನ್ನ ಪ್ರಾಣವನ್ನು ಸಂಕಷ್ಟಕ್ಕೆ ದೂಡಿದ್ದ ಘಟನೆಯೊಂದು ಬೆಳಕಿಗೆ ಬಂದಿದೆ. ಸಜ್ಜನಗಡ-ತೋಸೆಘರ್ ಮಾರ್ಗದ ಬೋರ್ನ್ ಘಾಟ್‌ನಲ್ಲಿ ಸೆಲ್ಫಿ ತೆಗೆಯುತ್ತಿದ್ದ ವೇಳೆ ಯುವತಿ ನೇರವಾಗಿ ಕಣಿವೆಗೆ ಬಿದ್ದಿದ್ದಾಳೆ. ಶನಿವಾರ (ಆಗಸ್ಟ್ 3) ಸಂಜೆ 6 ಗಂಟೆ ಸುಮಾರಿಗೆ ಮಂಕಿ ಪಾಯಿಂಟ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ರಕ್ಷಣಾ ತಂಡ, ತೋಸೆಘರ್ ಅರಣ್ಯ ನಿರ್ವಹಣಾ ಸಮಿತಿ ಮತ್ತು ಸತಾರಾ ಗ್ರಾಮಾಂತರ ಪೊಲೀಸರು ಕಣಿವೆಯಲ್ಲಿ ಬಿದ್ದ ಯುವತಿಯ ಜೀವವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗಾಯಗೊಂಡ ಯುವತಿಯ ಹೆಸರು ರೂಪಾಲಿ ದೇಶಮುಖ ಎಂದು ತಿಳಿದುಬಂದಿದೆ.
ಸೆಲ್ಫಿ ತೆಗೆಯುವಾಗ ಕಣಿವೆಯಲ್ಲಿ ಬಿದ್ದ ಯುವತಿ:ಸತಾರಾ ಜಿಲ್ಲೆಯ ಪ್ರವಾಸಿ ಸ್ಥಳಗಳು ಜನಸಾಗರದಿಂದ ತುಂಬಿ ತುಳುಕುತ್ತಿವೆ. ಆದರೆ, ಯುವಕ-ಯುವತಿಯರು ತಮ್ಮ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸದೆ ಪ್ರವಾಸಿ ತಾಣಗಳಲ್ಲಿ ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಆದರೆ, ಅಪಾಯಕಾರಿ ಸ್ಥಳದಲ್ಲಿ ಸೆಲ್ಫಿ ತೆಗೆದುಕೊಳ್ಳುವ ಪ್ರಯತ್ನದಲ್ಲಿ ಯುವತಿಯೊಬ್ಬಳು ಕಾಲು ಜಾರಿ 100 ಅಡಿ ಕಮರಿಗೆ ಬಿದ್ದಿದ್ದಾಳೆ.
ಯುವತಿಯನ್ನು ರಕ್ಷಿಸಿದ ರಕ್ಷಣಾ ತಂಡ: ಯುವತಿ ಕಣಿವೆಗೆ ಬಿದ್ದ ತಕ್ಷಣ ರಕ್ಷಣಾ ತಂಡ ತೋಸೆಘರ್ ಅರಣ್ಯ ನಿರ್ವಹಣಾ ಸಮಿತಿ ಸದಸ್ಯರು ಮತ್ತು ಸತಾರಾ ಗ್ರಾಮಾಂತರ ಪೊಲೀಸರೊಂದಿಗೆ ಸ್ಥಳಕ್ಕೆ ಆಗಮಿಸಿತು. ಅವರು ತ್ವರಿತವಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿದರು ಮತ್ತು ಕಣಿವೆಯಿಂದ ಯುವತಿಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿದ್ದರು. ಯುವತಿ ಕಣಿವೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು, ಆಕೆಯನ್ನು ಚಿಕಿತ್ಸೆಗಾಗಿ ಸತಾರಾ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.