ಶಿರಡಿ: ''ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಅಮಿತ್ ಶಾ ಅವರು ತಮ್ಮ ಸಹೋದರ ರಾಹುಲ್ ಗಾಂಧಿ ಅವರ ಬಗ್ಗೆ ವಿನಾ ಕಾರಣ ಸುಳ್ಳುಗಳನ್ನು ಹರಡುತ್ತಿದ್ದಾರೆ'' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪ ಮಾಡಿದರು.
ಶನಿವಾರ ಮಹಾರಾಷ್ಟ್ರದ ಅಹಲ್ಯಾನಗರ ಜಿಲ್ಲೆಯ ಶಿರಡಿಯಲ್ಲಿ ಮಹಾವಿಕಾಸ್ ಅಘಾಡಿ ಅಭ್ಯರ್ಥಿ ಪರ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ''ರಾಹುಲ್ ಗಾಂಧಿ ಮೀಸಲಾತಿ ವಿರೋಧಿ ಎಂದು ಪ್ರಧಾನಿ ಮೋದಿ, ಅಮಿತ್ ಶಾ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ದೇಶದಲ್ಲಿ ಜಾತಿ ಗಣತಿ ನಡೆಯಬೇಕೆಂದು ಹೇಳಿದ್ದರಿಂದ ರಾಹುಲ್ ಗಾಂಧಿ ಮೇಲೆ ಈ ರೀತಿ ವಿನಾ ಕಾರಣ ಸುಳ್ಳುಗಳನ್ನು ಹರಡುತ್ತಿದ್ದಾರೆ'' ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದರು.
ಇಲ್ಲಿಂದಲೇ ಸ್ವಾತಂತ್ರ್ಯ ಹೋರಾಟಕ್ಕೆ ಬಲ ಬಂದಿತು:''ದೇಶದ ಈ ಭೂಮಿ ದೇಶದ ದಿಕ್ಕನ್ನು ತೋರಿಸಿದೆ. ಇಲ್ಲಿಂದಲೇ ಸ್ವಾತಂತ್ರ್ಯ ಹೋರಾಟಕ್ಕೆ ಬಲ ಬಂದಿತು. ಹಾಗಾಗಿ ನಮಗೆಲ್ಲ ಮಹಾರಾಷ್ಟ್ರದ ಬಗ್ಗೆ ಹೆಮ್ಮೆ ಇದೆ. ಆದರೆ, ಛತ್ರಪತಿ ಶಿವಾಜಿ ಮಹಾರಾಜರನ್ನು ಈ ನೆಲದಲ್ಲಿ ಅವಮಾನಿಸಲಾಗುತ್ತಿದೆ. ನಿಮಗೆ ಅವಮಾನ ಮಾಡಲಾಗುತ್ತಿದೆ. ಮೋದಿ ಸೇರಿದಂತೆ ಈ ಎಲ್ಲ ನಾಯಕರು ಅವರ (ಶಿವಾಜಿ ಮಹಾರಾಜ್) ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ಅವರನ್ನು ಗೌರವಿಸುತ್ತಿಲ್ಲ. ಪ್ರಧಾನಿ ಮೋದಿ ಸಂಸತ್ತಿನ ಹೊರಗೆ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಶಂಕುಸ್ಥಾಪನೆ ನೆರವೇರಿಸಿದರು. ಆದರೆ, ನಂತರ ಆ ಕಾಮಗಾರಿಯನ್ನು ನಿಲ್ಲಿಸಿದರು. ಮುಂಬೈ ಬಳಿಯ ಅರಬ್ಬಿ ಸಮುದ್ರದಲ್ಲಿ ಯೋಧ ರಾಜನ ಉದ್ದೇಶಿತ ಸ್ಮಾರಕವನ್ನು ಅವರು ಉಲ್ಲೇಖಿಸುತ್ತಿದ್ದರು. ಅದನ್ನು ಅಷ್ಟಕ್ಕೆ ಬಿಟ್ಟರು. ತಮ್ಮ ಇಷ್ಟು ವರ್ಷದ ಆಡಳಿತಾವಧಿಯಲ್ಲಿ ಸತ್ಯ ಎಲ್ಲಿದೆ ಎಂದು ಪ್ರಧಾನಿ ಹೇಳಬೇಕು'' ಎಂದು ಸವಾಲು ಹಾಕಿದರು.
10 ಲಕ್ಷ ಕೋಟಿ ಯೋಜನೆ ಕಿತ್ತುಕೊಂಡು ಅನ್ಯಾಯ:''ಮಹಾರಾಷ್ಟ್ರದಿಂದ 10 ಲಕ್ಷ ಕೋಟಿ ರೂ. ಯೋಜನೆಗಳನ್ನು ಕಿತ್ತುಕೊಳ್ಳುವ ಮೂಲಕ ಇಲ್ಲಿನ ಜನಕ್ಕೆ ಅನ್ಯಾಯ ಮಾಡಲಾಗಿದೆ. ಇದನ್ನು ಸಹಿಸಲಾಗದು. ಬಾಳಾಸಾಹೇಬ್ ಠಾಕ್ರೆ ಇದ್ದಿದ್ದರೆ ಬೇರೆಯೇ ಇತ್ತು. ಅವರ ವಿಚಾರಧಾರೆಯೇ ವಿಭಿನ್ನವಾಗಿತ್ತು. ಯಾವುದೇ ಕಾರಣಕ್ಕೂ ಈ ಅವಮಾನಗಳನ್ನು ಸಹಿಸುತ್ತಿರಲಿಲ್ಲ. ಅವತಾರ ಪುರುಷರ ಪ್ರತಿಮೆಗಳ ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆಸಿ, ಆ ವ್ಯಕ್ತಿಯನ್ನು ಅವಮಾನಿಸುವ ಉದ್ದೇಶದಿಂದ ಅವರ ಹೆಸರನ್ನು ತೆಗೆದುಕೊಳ್ಳುವುದು ಎಷ್ಟು ಯೋಗ್ಯ? ಎಂದ ಪ್ರಿಯಾಂಕಾ ಗಾಂಧಿ, ಜಾತಿ ಗಣತಿ ನಡೆಸಿ ಮೀಸಲಾತಿ ಮೇಲಿನ ಶೇ. 50 ಮಿತಿಯನ್ನು ತೆಗೆದುಹಾಕಲಾಗುವುದು ಎಂದು ಸಾರ್ವಜನಿಕವಾಗಿ ಘೋಷಿಸಲಿ'' ಎಂದು ಪ್ರಧಾನಿಗೆ ಸವಾಲು ಹಾಕಿದರು.