ಬೆಳಗಾವಿ: "ನಮ್ಮ ಪಂಚಮಸಾಲಿ ಮೀಸಲಾತಿ ಹೋರಾಟವನ್ನು ಮತ್ತಷ್ಟು ಗಟ್ಟಿಗೊಳಿಸಲು ಹಾಗೂ ಸರ್ಕಾರದ ದೌರ್ಜನ್ಯ ನೀತಿಯ ವಿರುದ್ಧ ಜನರನ್ನು ಜಾಗೃತಿಗೊಳಿಸಲು, ರಾಜ್ಯದ ಪ್ರತೀ ಗ್ರಾಮಗಳಿಗೂ ಭೇಟಿ ನೀಡುವ ಉದ್ದೇಶದಿಂದ ಪಂಚಮಸಾಲಿ ಪ್ರತಿಜ್ಞಾ ಕ್ರಾಂತಿ ಅಭಿಯಾನ ಜ.14ರಂದು ಕೂಡಲಸಂಗಮದಿಂದ ಆರಂಭಿಸಲಾಗುತ್ತದೆ" ಎಂದು ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ಸಂವಾದ, ಸಂಧಾನ, ಸಂಘರ್ಷ ನೀತಿಯ ಮೂಲಕ ಗ್ರಾಮ ಸಭೆಗಳನ್ನು ನಡೆಸಿ ಜಾಗೃತಿ ಮೂಡಿಸಲಾಗುವುದು. ತಾಲೂಕಿನಲ್ಲಿಯೂ ಸಭೆಗಳನ್ನು ನಡೆಸಿ, ಜನರ ಸಲಹೆ ಸೂಚನೆಗಳನ್ನು ಸಂಗ್ರಹಿಸಲಾಗುವುದು. ಬಳಿಕ ಪಂಚಮಸಾಲಿ ಹೋರಾಟದ ಮುಂದಿನ ರೂಪುರೇಷೆಗಳನ್ನು ಸಿದ್ಧದ್ದಪಡಿಸಲಾಗುವುದು" ಎಂದರು.
"ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ನಾಡಿನ ಮೂಲೆ ಮೂಲೆಗಳಿಂದ ಸಮಾಜದ ಬಾಂಧವರು ಬಂದಿದ್ದರು. ಅದರಲ್ಲಿ ಹಲವು ಜನರು ಗಾಯಗೊಂಡಿದ್ದಾರೆ. ಅವರ ಪ್ರತೀ ಮನೆ ಮನೆಗೆ ಭೇಟಿ ನೀಡಿ, ಬಸವ ರಕ್ಷ ಪತ್ರ ಕೊಡುವ ಮೂಲಕ ಧೈರ್ಯ ತುಂಬುತ್ತಿದ್ದೇನೆ. ರಕ್ತ ಚೆಲ್ಲಿದ್ದೀರಿ, ಮೀಸಲಾತಿ ಪಡೆಯೋಣ ಎಂಬ ಘೋಷವಾಕ್ಯದೊಂದಿಗೆ ನಮ್ಮ ಹೋರಾಟ ಆರಂಭವಾಗಲಿದೆ. ಮೀಸಲಾತಿ ಕೊಡುವುದು ಅಸಾಂವಿಧಾನಿಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ಅವರ ಹೇಳಿಕೆಯೇ ಅಸಾಂವಿಧಾನಿಕವಾಗಿದೆ" ಎಂದು ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.
"ಲಾಠಿಚಾರ್ಜ್ ಮಾಡಿದ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲು ವಿನಂತಿಸಿದ್ದೆವು. ಆದರೆ, ಅವರು 10 ಸಾವಿರ ರೂ. ಬಹುಮಾನ ನೀಡುವ ಮೂಲಕ ಮತ್ತಷ್ಟು ಪ್ರಚೋದನೆ ನೀಡುವ ಕೆಲಸ ಮಾಡಿದ್ದಾರೆ. ಪಂಚಮಸಾಲಿ ಸಮಾಜದ ಬಗ್ಗೆ ಈ ಸರ್ಕಾರಕ್ಕೆ ಎಳ್ಳಷ್ಟೂ ಕಾಳಜಿ ಇಲ್ಲ ಎನ್ನುವುದು ಇದರಿಂದ ಸಾಬೀತಾಗಿದೆ" ಎಂದರು.
"ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ವೀರಪ್ಪ ಮೊಯ್ಲಿ, ಬಸವರಾಜ್ ಬೊಮ್ಮಾಯಿ ಸರ್ಕಾರಗಳ ಅವಧಿಯಲ್ಲಿ ವಿವಿಧ ಜಾತಿ ಜನಾಂಗಗಳಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಲಾಗಿತ್ತು. ಆಗ ಯಾವುದೇ ಆಯೋಗದ ವರದಿಗಳನ್ನು ಪಡೆಯದೇ ಸಮುದಾಯಗಳನ್ನು ಮೀಸಲಾತಿ ಪ್ರವರ್ಗಗಳ ಪಟ್ಟಿಗೆ ಸೇರಿಸಲಾಗಿತ್ತು. ಆದರೆ, ಪಂಚಮಸಾಲಿಗಳಿಗೆ ಮೀಸಲಾತಿ ನೀಡುವಾಗ ಮಾತ್ರ ಶಾಶ್ವತ ಹಿಂದುಳಿದ ಆಯೋಗದ ವರದಿ ನಿರೀಕ್ಷಿಸಲಾಗುತ್ತಿದೆ. 2021ರಲ್ಲಿ ಜಯಪ್ರಕಾಶ್ ಹೆಗಡೆ ವರದಿ ಆಧಾರದ ಮೇಲೆ ಪಂಚಮಸಾಲಿಗಳಿಗೂ 2ಡಿ ಮೀಸಲಾತಿ ನೀಡಲಾಗಿತ್ತು. ಅದನ್ನು ತಾಂತ್ರಿಕ ಕಾರಣಗಳಿಗಾಗಿ ತಡೆಹಿಡಿಯಲಾಯಿತು. ಹಾಗಾಗಿ, ಮೀಸಲಾತಿ ಪಡೆಯುವುದು ಪಂಚಮಸಾಲಿ ಜನಾಂಗದ ಹಕ್ಕು. ಅದನ್ನು ಪಡೆಯಲು ನಾವು ಹೋರಾಟದ ಹಾದಿ ಹಿಡಿಯುವುದು ಅನಿವಾರ್ಯವಾಗಿದೆ" ಎಂದು ಹೇಳಿದರು.
ಗುಂಡು ಪಾಟೀಲ, ಶಿವಾನಂದ ತಂಬಾಕೆ, ಮಹಾಂತೇಶ ವಕ್ಕುಂದ, ರಾವಸಾಹೇಬ್ ಪಾಟೀಲ್, ಗೌಡಪ್ಪಗೌಡ ನಾಡಗೌಡ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಇದ್ದರು.