ವಿಜಯವಾಡ (ಆಂಧ್ರಪ್ರದೇಶ):ಆಂಧ್ರಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭರ್ಜರಿ ಮಳೆಯಿಂದಾಗಿ ಭಾರೀ ಪ್ರವಾಹ ಉಂಟಾಗಿದೆ. ಇದರಿಂದ ವಿಜಯವಾಡ, ಎನ್ಟಿಆರ್, ಗುಂಟೂರು, ಏಲೂರು, ಪಲ್ನಾಡು, ಬಾಪಟ್ಲಾ, ಪ್ರಕಾಶಂ ಜಿಲ್ಲೆಗಳು ಹೆಚ್ಚು ಹಾನಿಗೀಡಾಗಿವೆ. ಸಿಎಂ ಚಂದ್ರಬಾಬು ನಾಯ್ಡು ಅವರೇ ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ರಕ್ಷಣಾ ಕಾರ್ಯಾಚರಣೆ ಪರಿಶೀಲಿಸಿದರು.
ರಾಜ್ಯ ವಿಪತ್ತು ನಿರ್ವಹಣಾ ಪಡೆಯ (ಎಸ್ಡಿಆರ್ಎಫ್) 20 ತಂಡಗಳು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್ಡಿಆರ್ಎಫ್) 19 ತಂಡಗಳು ಕಾರ್ಯಾಚರಣೆಯಲ್ಲಿ ತೊಡಗಿವೆ. 2 ಎಸ್ಡಿಆರ್ಎಫ್, 9 ಎನ್ಡಿಆರ್ಎಫ್ ತಂಡಗಳು ವಿಜಯವಾಡದಲ್ಲಿ ಬೀಡು ಬಿಟ್ಟಿವೆ. ಎನ್ಟಿಆರ್, ಗುಂಟೂರು ಜಿಲ್ಲಾಡಳಿತ ಮನವಿ ಮೇರೆಗೆ ರಕ್ಷಣಾ ಕಾರ್ಯಕ್ಕಾಗಿ ಎರಡು ಹೆಲಿಕಾಪ್ಟರ್ ನಿಯೋಜಿಸಲು ಭಾರತೀಯ ನೌಕಾಪಡೆ ಒಪ್ಪಿಗೆ ನೀಡಿದೆ.
ಪ್ರವಾಹದಿಂದಾಗಿ ರಸ್ತೆಗಳು, ರೈಲ್ವೆ ಹಳಿಗಳು ಹಾನಿಗೀಡಾಗಿದ್ದು, ಸಂಪರ್ಕ ಕಡಿದುಕೊಂಡಿವೆ. ಮೀನುಗಾರಿಕಾ ದೋಣಿಗಳೂ ನಾಶವಾಗಿವೆ. ಲಕ್ಷಾಂತರ ಹೆಕ್ಟೇರ್ ಪ್ರದೇಶದ ವಾಣಿಜ್ಯ, ತೋಟಗಾರಿಕಾ ಬೆಳೆ ಹಾನಿಯಾಗಿದೆ. ಮೂರು ದಿನಗಳ ಮಳೆ ಸಂಬಂಧಿತ ಅವಘಡಗಳಲ್ಲಿ ರಾಜ್ಯದಲ್ಲಿ 15 ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ.
ಪರಿಹಾರ ಕಾರ್ಯಕ್ಕೆ ಸಿಎಂ ಬೇಸರ:ವಿಜಯವಾಡದಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಿಎಂ ಚಂದ್ರಬಾಬು ತಾವೇ ಜೆಸಿಬಿ ಹತ್ತಿ ಪರಿಶೀಲನೆ ನಡೆಸಿದರು. ಪರಿಹಾರ ಕಾರ್ಯದ ವೇಳೆ ಕೆಲವು ಅಧಿಕಾರಿಗಳ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಹಿಂದಿನ ಸರ್ಕಾರದ ಬೇಜವಾಬ್ದಾರಿತನ ಈಗಲೂ ತೋರಿಸಿದಲ್ಲಿ ಕ್ರಮ ಜರುಗಿಸಲಾವುದು ಎಂದು ಎಚ್ಚರಿಸಿದರು.
ಪ್ರವಾಹದಿಂದ ಹಾನಿಯಾದ ಪ್ರದೇಶಗಳ ಜನರಿಗೆ ಸೂಕ್ತ ರಕ್ಷಣೆ, ವಸತಿ ಸೌಲಭ್ಯ ನೀಡಬೇಕು. ಕ್ಷಿಪ್ರಗತಿಯಲ್ಲಿ ಕಾರ್ಯಾಚರಣೆ ನಡೆಸಬೇಕು. ಅಧಿಕಾರಿಗಳ ಕಾರ್ಯವೈಖರಿಯಿಂದ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುವಂತೆ ಕೆಲಸ ಮಾಡಿ. ತಾನಾಗಿಯೇ ಸ್ಥಳಕ್ಕೆ ಬಂದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ ಹೇಗೆ ಎಂದು ಅಧಿಕಾರ ವರ್ಗವನ್ನು ಜರಿದರು. ಇದೇ ವೇಳೆ, ಹಲವು ಸಂತ್ರಸ್ತರನ್ನು ಭೇಟಿ ಮಾಡಿದ ಸಿಎಂ ಬಾಬು ನಿಮ್ಮ ಬೆನ್ನೆಲುಬಾಗಿ ಸರ್ಕಾರ ಇದೆ ಎಂದು ಧೈರ್ಯ ತುಂಬಿದರು. ಜಕ್ಕಂಪುಡಿ ಮತ್ತು ಸಿತಾರದಲ್ಲಿ ನಿರ್ಮಿಸಿರುವ ಪರಿಹಾರ ಕೇಂದ್ರಗಳು, ಪ್ರವಾಹ ಪೀಡಿತ ಪ್ರದೇಶಗಳಿಗೆ ಜೆಸಿಬಿಯಲ್ಲಿ ಕುಳಿತು ಪರಿಶೀಲನೆ ನಡೆಸಿದರು.
ಮತ್ತೆ ಮಳೆ ಎಚ್ಚರಿಕೆ:ಆಂಧ್ರಪ್ರದೇಶದಲ್ಲಿ ಮತ್ತೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಸೆಪ್ಟೆಂಬರ್ 5 ರ ವೇಳೆಗೆ ಪಶ್ಚಿಮ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಲಿದ್ದು, ರಾಜ್ಯದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ರಾಜಸ್ಥಾನದ ಜೈಸಲ್ಮೇರ್‌ನಿಂದ ವಿದರ್ಭ ಮತ್ತು ತೆಲಂಗಾಣ ಮೂಲಕ ಮಚಲಿಪಟ್ಟಣಕ್ಕೆ ವಿಸ್ತರಿಸುವ ನಿರೀಕ್ಷೆಯಿದೆ.
ಇದನ್ನೂ ಓದಿ:ತೆಲಂಗಾಣ, ಆಂಧ್ರದಲ್ಲಿ ಮಳೆ ಆರ್ಭಟ; ಒಂದೇ ದಿನ 10 ಮಂದಿ ಸಾವು - Telangana Andhra Pradesh Heavy Rain