ನವದೆಹಲಿ: ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ನಿಜವಾದ ಸಂಕಷ್ಟ ಎದುರಾಗಿದೆ. ರಾಜತಾಂತ್ರಿಕ ಪಾಸ್‌ಪೋರ್ಟ್ ಮೇಲೆ ಪ್ರಜ್ವಲ್ ವಿದೇಶಕ್ಕೆ ತೆರಳಿ ತಲೆ ಮರೆಸಿಕೊಂಡಿದ್ದಾರೆ. ಇದೀಗ ಈ ರಾಜತಾಂತ್ರಿಕ ಪಾಸ್‌ಪೋರ್ಟ್ ಏಕೆ ರದ್ದುಗೊಳಿಸಬಾರದು ಎಂದು ವಿದೇಶಾಂಗ ಸಚಿವಾಲಯ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಪ್ರಜ್ವಲ್ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಗೊಳಿಸುವಂತೆ ಕರ್ನಾಟಕ ಸರ್ಕಾರದ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ಅಂತೆಯೇ, 1967ರ ಪಾಸ್‌ಪೋರ್ಟ್ ಕಾಯ್ದೆಯ ನಿಬಂಧನೆಗಳು ಮತ್ತು ಸಂಬಂಧಿತ ನಿಯಮಗಳ ಅಡಿ ಇದರ ಪ್ರಕ್ರಿಯೆಯನ್ನು ವಿದೇಶಾಂಗ ಸಚಿವಾಲಯ ಕೈಗೆತ್ತಿಗೊಂಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಹಾಸನ ಲೋಕಸಭಾ ಕ್ಷೇತ್ರಕ್ಕೆ ಮತದಾನವಾದ ಮರು ದಿನ ಎಂದರೆ, ಏಪ್ರಿಲ್ 27ರಂದು ಭಾರತವನ್ನು ತೊರೆದಿದ್ದಾರೆ. ಪ್ರಸ್ತುತ, ಪ್ರಜ್ವಲ್ ಜರ್ಮನಿಯಲ್ಲಿದ್ದಾರೆ ಎಂದು ನಂಬಲಾಗಿದೆ. ಪ್ರಜ್ವಲ್ ಅವರ ಪಾಸ್‌ಪೋರ್ಟ್ ರದ್ದುಗೊಳಿಸುವ ಪ್ರಕ್ರಿಯೆಯ ಭಾಗವಾಗಿ ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಇಮೇಲ್ ಮೂಲಕ ಈ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದು ಮಾಡಲಿ: ಗೃಹಸಚಿವ ಜಿ.ಪರಮೇಶ್ವರ್
ಪಾಸ್‌ಪೋರ್ಟ್ ರದ್ಧತಿಯ ಪರಿಣಾಮವೇನು?: ಪಾಸ್‌ಪೋರ್ಟ್ ರದ್ದುಗೊಂಡರೆ, ಪ್ರಜ್ವಲ್ ವಿದೇಶದಲ್ಲಿ ವಾಸ ಮಾಡುವುದು ಕಾನೂನು ಬಾಹಿರವಾಗಲಿದೆ. ಅವರು ವಾಸಿಸುವ ದೇಶದಲ್ಲಿ ಸಂಬಂಧಿಸಿದ ಅಧಿಕಾರಿಗಳಿಂದ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಆದ್ದರಿಂದ ಬುಧವಾರವಷ್ಟೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ಮೋದಿ ಅವರಿಗೆ ಎರಡನೇ ಪತ್ರ ಬರೆದು ಪ್ರಜ್ವಲ್ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಗೊಳಿಸಲು ತ್ವರಿತ ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. ಮೇ 1ರಂದು ಕೂಡ ಸಿಎಂ ಇದೇ ರೀತಿಯ ಪತ್ರವನ್ನು ಪ್ರಧಾನಿಗೆ ಬರೆದಿದ್ದರು.
ಕರ್ನಾಟಕ ಸರ್ಕಾರವು ಪ್ರಜ್ವಲ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪದ ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದೆ. ಈಗಾಗಲೇ ಪ್ರಜ್ವಲ್ ವಿರುದ್ಧ ಸ್ಥಳೀಯ ನ್ಯಾಯಾಲಯ ಬಂಧನದ ವಾರಂಟ್ ಹೊರಡಿಸಿದೆ. ಇದರ ಬಳಿಕ ಎಸ್‌ಐಟಿ ಸಹ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಗೊಳಿಸುವಂತೆ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದಿತ್ತು. ಎಸ್‌ಐಟಿ ಮನವಿ ಮೇರೆಗೆ ಈಗಾಗಲೇ ಇಂಟರ್‌ಪೋಲ್‌ನಿಂದ ರೇವಣ್ಣ ಎಲ್ಲಿದ್ದಾರೆ ಎಂಬ ಮಾಹಿತಿ ಕೋರಿ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಲಾಗಿದೆ.
ಮತ್ತೊಂದೆಡೆ, ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ಬೆಳಕಿಗೆ ಬಂದ ಕೂಡಲೇ ಜೆಡಿಎಸ್ ಸಂಸದರಾಗಿರುವ ಪ್ರಜ್ವಲ್ ರೇವಣ್ಣ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಪ್ರಜ್ವಲ್ ತಂದೆ ಹೆಚ್.ಡಿರೇವಣ್ಣ ಅವರ ಮೇಲೂ ಲೈಂಗಿಕ ಕಿರುಕುಳ ಮತ್ತು ಕ್ರಿಮಿನಲ್ ಬೆದರಿಕೆ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಸದ್ಯ ಅವರು ಜಾಮೀನಿನ ಮೇಲೆ ಹೊರಗಿದ್ದಾರೆ.
ಇದನ್ನೂ ಓದಿ:ಪೊಲೀಸರಿಗೆ ಶರಣಾಗದಿದ್ದಲ್ಲಿ ಏಕಾಂಗಿಯಾಗುವೆ: ಕುಟುಂಬದಿಂದಲೇ ಹೊರಹಾಕುವುದಾಗಿ ಪ್ರಜ್ವಲ್ಗೆ ಎಚ್ಚರಿಕೆ ನೀಡಿದ ದೇವೇಗೌಡ