ಕರ್ನಾಟಕ

karnataka

ETV Bharat / bharat

ವಯನಾಡ್​ನಲ್ಲಿ ರಣಮಳೆಗೆ ಸರಣಿ ಭೂಕುಸಿತ: ಮಕ್ಕಳು ಸೇರಿ 125ಕ್ಕೇರಿದ ಸಾವಿನ ಸಂಖ್ಯೆ, 400ಕ್ಕೂ ಹೆಚ್ಚು ಕುಟುಂಬಗಳಿಗೆ ಸಂಕಷ್ಟ - Wayanad Landslides - WAYANAD LANDSLIDES

ಕೇರಳದ ವಯನಾಡ್ ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಭೂಮಿ ಕುಸಿದು ಅಪಾರ ಸಾವು-ನೋವು ಸಂಭವಿಸಿದೆ. ಸಾವಿನ ಸಂಖ್ಯೆ 125ಕ್ಕೆ ಏರಿಕೆ ಆಗಿದೆ. ಸುಮಾರು 98ಕ್ಕೂ ಹೆಚ್ಚು ಮಂದಿ ನಾಪತ್ತೆ ಆಗಿದ್ದಾರೆ. ನೂರಾರು ಮಂದಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

WAYANAD LANDSLIDES
ರಕ್ಷಣಾ ಕಾರ್ಯಾಚರಣೆ (X@04NDRF)

By PTI

Published : Jul 30, 2024, 7:52 AM IST

Updated : Jul 30, 2024, 11:05 PM IST

ವಯನಾಡ್(ಕೇರಳ): ನೆರೆ ರಾಜ್ಯ ಕೇರಳದ ವಯನಾಡ್ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಇಂದು ಮುಂಜಾನೆ ಎರಡರಿಂದ ಮೂರು ಭೀಕರ ಭೂಕುಸಿತ ಉಂಟಾಗಿದೆ. ಇದುವರೆಗೆ ಅವಶೇಷಗಳಡಿ ಸಿಲುಕಿ ಏಳು ಮಕ್ಕಳು ಸೇರಿ 125 ಮಂದಿ ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ. ಇನ್ನೂ ಹಲವು ಮಂದಿ ಸಿಕ್ಕಿಬಿದ್ದಿರುವ ಶಂಕೆ ವ್ಯಕ್ತವಾಗಿದ್ದು, ಸಾವುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಸುಮಾರು 400 ಕುಟುಂಬಗಳು ತೊಂದರೆಗೊಳಗಾಗಿದ್ದು, ರಕ್ಷಣಾ ತಂಡಗಳು ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ನಡೆಸುತ್ತಿವೆ.

ವಯನಾಡ್​ನಲ್ಲಿ ಭೂಕುಸಿತ (ETV Bharat)
ಮಳೆ ನೀರಿನಲ್ಲಿ ಮೇಕೆಯನ್ನು ರಕ್ಷಿಸುತ್ತಿರುವುದು. (ETV Bharat)

ಸರಣಿ ಭೂಕುಸಿತ: ಮೆಪ್ಪಾಡಿ ಸಮೀಪದ ಗುಡ್ಡಗಾಡು ಪ್ರದೇಶಗಳಲ್ಲಿ ರಾತ್ರಿ 1 ಗಂಟೆಯ ಸುಮಾರಿಗೆ ಮೊದಲ ಭೂಕುಸಿತ ಸಂಭವಿಸಿದೆ. ನಂತರ ಬೆಳಗಿನ ಜಾವ 4.10ರ ಸುಮಾರಿಗೆ ಕಲ್ಪೆಟ್ಟಾದಲ್ಲಿ ಭೂಕುಸಿತ ಸಂಭವಿಸಿತು. ಪರಿಣಾಮ, ಹಲವು ಕುಟುಂಬಗಳು ಕಣ್ಮರೆಯಾಗಿವೆ. ಅಲ್ಲದೇ, ಮುಂಡಕ್ಕೈ, ಚೂರಲ್ಮಾಲಾ, ಅಟ್ಟಮಾಲ ಮತ್ತು ನೂಲ್ಪುಳನಲ್ಲೂ ಭೂಕುಸಿತವಾಗಿದೆ. ಇಲ್ಲಿನ ಗ್ರಾಮಗಳ ಸಂಪರ್ಕ ಕಡಿತಗೊಂಡಿವೆ. ಧಾರಾಕಾರ ಮಳೆ ಸುರಿಯುತ್ತಿದ್ದು, ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ ಎಂದು ವರದಿಯಾಗಿದೆ.

ಕುಟುಂಬವೊಂದು ಮನೆಯಲ್ಲಿನ ವಸ್ತುಗಳನ್ನು ಸಾಗಿಸುತ್ತಿರುವುದು. (ETV Bharat)

ಘಟನಾ ಸ್ಥಳಕ್ಕೆ ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್‌ಡಿಎಂಎ), ಅಗ್ನಿಶಾಮಕ ದಳ ಮತ್ತು ಎನ್‌ಡಿಆರ್‌ಎಫ್ ತಂಡಗಳು ದೌಡಾಯಿಸಿವೆ. ಹೆಚ್ಚುವರಿ ಎನ್‌ಡಿಆರ್‌ಎಫ್ ತಂಡಗಳನ್ನೂ ರವಾನಿಸಲಾಗಿದೆ. ಕಣ್ಣೂರಿನಿಂದ ರಕ್ಷಣಾ ಭದ್ರತಾ ದಳದ ಎರಡು ತಂಡಗಳನ್ನು ವಯನಾಡ್‌ಗೆ ತೆರಳುವಂತೆ ಸೂಚನೆ ನೀಡಲಾಗಿದೆ ಎಂದು ಕೆಎಸ್‌ಡಿಎಂಎ ತನ್ನ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್‌ ಮಾಡಿದೆ. ರಾಜ್ಯ ಅರಣ್ಯ ಸಚಿವ ಎ.ಕೆ.ಸಶೀಂದ್ರನ್ ಸಹ ಧಾವಿಸಿದ್ದಾರೆ.

ಸುರಕ್ಷಿತ ಸ್ಥಳಗಳತ್ತ ಜನತೆ ಸಾಗುತ್ತಿರುವುದು. (ETV Bharat)

ಜನರ ಸ್ಥಳಾಂತರಕ್ಕೆ ಹೆಲಿಕಾಪ್ಟರ್‌ ನಿಯೋಜನೆ:ಚೂರಲ್ಮಲಾ ಪಟ್ಟಣದಲ್ಲಿ ಒಂದು ಮಗು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದರೆ, ತೊಂಡರ್ನಾಡ್ ಗ್ರಾಮದಲ್ಲಿ ನೇಪಾಳ ಮೂಲದ ಕುಟುಂಬದ ಒಂದು ವರ್ಷದ ಮಗು ಮೃತಪಟ್ಟಿರುವುದು ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂಕಷ್ಟದಲ್ಲಿ ಸಿಲುಕಿರುವ ವ್ಯಕ್ತಿ (Special Arrangement)

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ''ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ವಾಯುಪಡೆಯ ಎರಡು ಹೆಲಿಕಾಪ್ಟರ್‌ಗಳು ಶೀಘ್ರದಲ್ಲೇ ಸೂಲೂರಿನಿಂದ ವಯನಾಡ್‌ಗೆ ತೆರಳಲಿವೆ'' ಎಂದು ಫೇಸ್‌ಬುಕ್ ಪೋಸ್ಟ್​ ಮಾಡಿದ್ದಾರೆ.

ವಯನಾಡ್​ನಲ್ಲಿ ಸಂಭವಿಸಿದ ಭೂಕುಸಿತ (ETV Bharat)

ಶಾಸಕ ಟಿ.ಸಿದ್ದಿಕ್ ಪ್ರತಿಕ್ರಿಯಿಸಿ, ''ಮುಂಡಕ್ಕೈ ಪ್ರದೇಶದಿಂದ ಸಂತ್ರಸ್ತ ಜನರನ್ನು ಏರ್​ಲಿಫ್ಟ್​ ಮಾಡಲು ಅಧಿಕಾರಿಗಳು ಯೋಜನೆ ರೂಪಿಸುತ್ತಿದ್ದಾರೆ. ಭೂಕುಸಿತದಲ್ಲಿ ಕಾಣೆಯಾದ ಮತ್ತು ಸತ್ತವರ ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ಇಲ್ಲ. ಹಲವು ಪ್ರದೇಶಗಳು ಸಂಪರ್ಕ ಕಡಿತಗೊಂಡಿವೆ. ಎನ್‌ಡಿಆರ್‌ಎಫ್ ಸಿಬ್ಬಂದಿ ಘಟನಾ ಸ್ಥಳಗಳಿಗೆ ತಲುಪಲು ಪ್ರಯತ್ನಿಸುತ್ತಿದ್ದಾರೆ'' ಎಂದು ತಿಳಿಸಿದ್ದಾರೆ.

ವಯನಾಡ್​ನಲ್ಲಿ ಸಂಭವಿಸಿದ ಭೂಕುಸಿತ (ETV Bharat)

ಈ ನಡುವೆ ಹಲವಾರು ಕುಟುಂಬಗಳನ್ನು ಸುರಕ್ಷಿತವಾಗಿರುವ ಅವರ ಸಂಬಂಧಿಕರ ಮನೆಗಳು ಹಾಗೂ ವಿವಿಧ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹೆಚ್ಚಿನ ಸಂಖ್ಯೆಯ ಹೋಂಸ್ಟೇಗಳನ್ನು ಹೊಂದಿರುವ ಅಟ್ಟಮಾಲಾವು ಪ್ರವೇಶದಲ್ಲಿ ಅಪಾರ ಹಾನಿಯಾಗಿದೆ. ಪ್ರವಾಸಿಗರೂ ಸಿಕ್ಕಿಬಿದ್ದಿರುವ ವರದಿಗಳಾಗಿವೆ.

66 ಗಾಯಾಳುಗಳು ಆಸ್ಪತ್ರೆಗೆ ದಾಖಲು - 98ಕ್ಕೂ ಹೆಚ್ಚು ಮಂದಿ ನಾಪತ್ತೆ:''ಭೂಕುಸಿತ ಪ್ರದೇಶಗಳಲ್ಲಿರಕ್ಷಣಾ ಕಾರ್ಯ ಚುರುಕು ಪಡೆದಿದೆ. ಇಲ್ಲಿಯವರೆಗೆ ಅನೇಕರನ್ನು ರಕ್ಷಿಸಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. 53 ಜನ ಗಾಯಾಳುಗಳನ್ನು ಒಂದೇ ಆಸ್ಪತ್ರೆಗ ದಾಖಲಿಸಲಾಗಿದೆ. ಇದೇ ಆಸ್ಪತ್ರೆಯಲ್ಲಿ ಆರು ಮೃತದೇಹಗಳಿವೆ. ಮತ್ತೊಂದು ಆಸ್ಪತ್ರೆಯಲ್ಲಿ 13 ಮಂದಿ ಗಾಯಾಳುಗಳನ್ನು ದಾಖಲಿಸಲಾಗಿದೆ. ಇಲ್ಲಿಯೂ ಆರು ಮೃತದೇಹಗಳಿವೆ'' ಎಂದು ಸಚಿವ ಸಶೀಂದ್ರನ್ ತಿಳಿಸಿದ್ದಾರೆ.

''ರಕ್ಷಣಾ ಕಾರ್ಯಾಚರಣೆಗಾಗಿ ಹೆಲಿಕಾಪ್ಟರ್‌ಗಳ ಬರುವಿಕೆಗಾಗಿ ಕಾಯುತ್ತಿದ್ದೇವೆ. ಶೀಘ್ರದಲ್ಲೇ ಹೊಸ ರೋಪ್‌ವೇ ನಿರ್ಮಿಸಲಾಗುವುದು. ಈ ಪ್ರದೇಶದಲ್ಲಿ ಸೇತುವೆ ಮುಳುಗಿದೆ. ಸಂಕಷ್ಟದಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ಸೇನೆ ತಾತ್ಕಾಲಿಕ ಸೇತುವೆ ನಿರ್ಮಿಸಲಿದೆ'' ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಜಾರ್ಖಂಡ್‌ನಲ್ಲಿ ಹಳಿ ತಪ್ಪಿದ ಹೌರಾ-ಮುಂಬೈ ಮೇಲ್​ ಎಕ್ಸ್​ಪ್ರೆಸ್; ಹಲವು ಪ್ರಯಾಣಿಕರಿಗೆ ಗಾಯ

Last Updated : Jul 30, 2024, 11:05 PM IST

ABOUT THE AUTHOR

...view details