ಜಲ್ನಾ (ಮಹಾರಾಷ್ಟ್ರ):ಮರಾಠಾ ಮೀಸಲಾತಿ ವಿವಾದಕ್ಕೆ ಸಂಬಂಧಿಸಿದಂತೆ ಐದು ದಿನಗಳ ಹಿಂದೆ ಆರಂಭಿಸಿದ್ದ ಅನಿರ್ದಿಷ್ಟಾವಧಿ ಉಪವಾಸವನ್ನು ಹೋರಾಟಗಾರ ಮನೋಜ್ ಜರಾಂಗೆ ಪಾಟೀಲ್ ಬುಧವಾರ ಹಿಂಪಡೆದಿದ್ದಾರೆ. ಮೀಸಲಾತಿ ಹೋರಾಟವನ್ನು ಮುಂದುವರಿಸಲು ತಾವು ಜೀವಂತವಾಗಿರುವುದು ಅಗತ್ಯವಾಗಿದೆ ಎಂದು ಸಮುದಾಯದ ಜನತೆ ಅಭಿಪ್ರಾಯ ವ್ಯಕ್ತಪಡಿಸಿರುವುದರಿಂದ ಉಪವಾಸ ಸತ್ಯಾಗ್ರಹ ಸ್ಥಗಿತಗೊಳಿಸುತ್ತಿರುವುದಾಗಿ ಅವರು ಹೇಳಿದರು. ಜಲ್ನಾ ಜಿಲ್ಲೆಯ ತಮ್ಮ ಹುಟ್ಟೂರಾದ ಅಂತರ್ವಾಲಿ ಸರಾಟಿ ಗ್ರಾಮದಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅವರು ಈ ನಿರ್ಧಾರ ಪ್ರಕಟಿಸಿದರು.
ಕುಣಬಿ ಸಮುದಾಯದವರನ್ನು ಮರಾಠಾ ಸಮುದಾಯದ ಸದಸ್ಯರ 'ಋಷಿ ಸೋಯಾರೆ' (ರಕ್ತ ಸಂಬಂಧಿಗಳು) ಎಂದು ಗುರುತಿಸುವ ಕರಡು ಅಧಿಸೂಚನೆಯನ್ನು ಜಾರಿಗೆ ತರುವುದು ಮತ್ತು ಇತರ ಹಿಂದುಳಿದ ವರ್ಗಗಳ (ಒಬಿಸಿ) ವಿಭಾಗದಲ್ಲಿ ಕುಣಬಿಗಳಿಗೆ ಮೀಸಲಾತಿ ನೀಡುವುದು ಸೇರಿದಂತೆ ತಮ್ಮ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜರಾಂಗೆ ಪಾಟೀಲ್ ಜುಲೈ 20 ರಂದು ತಮ್ಮ ಇತ್ತೀಚಿನ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ್ದರು. ಗ್ಲೂಕೋಸ್ ಸಲೈನ್ ನಿರಾಕರಿಸಿದ್ದ ಅವರು ಮಂಗಳವಾರ ರಾತ್ರಿಯಿಂದ ಸಲೈನ್ ಹಾಕಿಸಲು ಒಪ್ಪಿದ್ದಾರೆ.
ಇಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾನು ಜೀವಂತವಾಗಿರಬೇಕೆಂದು ನನ್ನ ಸಮುದಾಯ ಬಯಸುತ್ತದೆ. ಈ ಬಗ್ಗೆ ಜನರಿಂದ ತೀವ್ರ ಒತ್ತಡವಿದೆ. ನಾನು ಸತ್ತರೆ, ಅದು ಸಮುದಾಯದೊಳಗೆ ವಿಭಜನೆಗೆ ಕಾರಣವಾಗುತ್ತದೆ. ಆದ್ದರಿಂದ ನಾನು ನನ್ನ ಉಪವಾಸವನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದೇನೆ." ಎಂದು ಹೇಳಿದರು.
ಮರಾಠಾ ಸಮುದಾಯಕ್ಕೆ ಮೀಸಲಾತಿ ನೀಡುವುದನ್ನು ಬಿಜೆಪಿ ಎಂಎಲ್ಸಿ ಪ್ರವೀಣ್ ದಾರೇಕರ್ ಮತ್ತು ಮಹಾರಾಷ್ಟ್ರ ಸಚಿವ ಛಗನ್ ಭುಜಬಲ್ ವಿರೋಧಿಸುತ್ತಿದ್ದಾರೆ ಎಂದು ಜರಾಂಗೆ ಟೀಕಿಸಿದರು.