ಛತ್ರಪತಿ ಸಂಭಾಜಿನಗರ: ಮಹಾರಾಷ್ಟ್ರದ ಬೀಡ್ ಜಿಲ್ಲೆಯ ನಾರಾಯಣಗಡದಲ್ಲಿ ನಡೆಯಲಿರುವ ದಸರಾ ರ್‍ಯಾಲಿಯಲ್ಲಿ ಮರಾಠಾ ಮೀಸಲಾತಿಗಾಗಿ ಒತ್ತಾಯಿಸಲು ಬಡವರು ಮತ್ತು ನಿರ್ಗತಿಕರು ಸೇರಿದಂತೆ ಸಮಸ್ತ ಮರಾಠಾ ಜನತೆ ಒಗ್ಗೂಡಬೇಕು ಎಂದು ಮರಾಠಾ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಗೆ ಪಾಟೀಲ್ ಸೋಮವಾರ ಮನವಿ ಮಾಡಿದ್ದಾರೆ. ಈ ವರ್ಷ ಅಕ್ಟೋಬರ್ 12ರಂದು ದಸರಾ ಆಚರಿಸಲಾಗುವುದು.
ಮರಾಠಾ ಸಮುದಾಯದ ಜನ ಮತ್ತು ರೈತರು ಭಾಗವಹಿಸುವ ರ್‍ಯಾಲಿಯಲ್ಲಿ ತಾವು ಮಾತನಾಡಲಿರುವುದಾಗಿ ಹೇಳಿದ ಜಾರಂಗೆ, ಈ ಕಾರ್ಯಕ್ರಮದಲ್ಲಿ ಯಾವುದೇ ರಾಜಕೀಯದ ಮಾತು ಇರುವುದಿಲ್ಲ ಎಂದರು. ಮರಾಠಾ ಸಮುದಾಯಕ್ಕೆ ಒಬಿಸಿ ಮೀಸಲಾತಿ ನೀಡುವಂತೆ ಒತ್ತಾಯಿಸಿ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ ನಂತರ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿರುವ ಛತ್ರಪತಿ ಸಂಭಾಜಿನಗರದ ಖಾಸಗಿ ಆಸ್ಪತ್ರೆಯಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಇತರ ಹಿಂದುಳಿದ ವರ್ಗಗಳ (ಒಬಿಸಿ) ವಿಭಾಗದಲ್ಲಿ ಮರಾಠಾ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಒತ್ತಾಯಿಸಿ ಜಾರಂಗೆ ಪಾಟೀಲ್ ಸೆಪ್ಟೆಂಬರ್ 17 ರಂದು ಉಪವಾಸ ಸತ್ಯಾಗ್ರಹ ನಡೆಸಿದ್ದರು. ಆದರೆ ಮರಾಠಾ ಸಮುದಾಯದ ಮನವಿಯನ್ನು ಪರಿಗಣಿಸಿ ಅವರು ಸೆಪ್ಟಂಬರ್ 25ರಂದು ಉಪವಾಸ ಸತ್ಯಾಗ್ರಹ ಹಿಂತೆಗೆದುಕೊಂಡರು.
ಈ ವರ್ಷದ ಫೆಬ್ರವರಿಯಲ್ಲಿ ಮಹಾರಾಷ್ಟ್ರ ವಿಧಾನಸಭೆಯು ಮರಾಠರಿಗೆ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಪ್ರತ್ಯೇಕ ವರ್ಗದ ಅಡಿಯಲ್ಲಿ ಶೇಕಡಾ 10ರಷ್ಟು ಮೀಸಲಾತಿ ನೀಡುವ ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಿತು. ಆದಾಗ್ಯೂ, ಒಬಿಸಿ ಕೋಟಾ ಅಡಿಯಲ್ಲಿ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂಬ ತಮ್ಮ ಬೇಡಿಕೆಗೆ ಜಾರಂಗೆ ಅಂಟಿಕೊಂಡಿದ್ದಾರೆ.