ಮುಂಬೈ, ಮಹಾರಾಷ್ಟ್ರ: ಮರಾಠ ಪರ ಮೀಸಲಾತಿ ಹೋರಾಟಗಾರ ಮನೋಜ್ ಜರಾಂಗೆ ಪಾಟೀಲ್ ಅವರು ಬಿಜೆಪಿ ವಿರುದ್ಧ ಮತ ಚಲಾಯಿಸುವಂತೆ ತಮ್ಮ ಬೆಂಬಲಿಗರಿಗೆ ಪದೇ ಪದೆ ಕರೆ ನೀಡಿದ್ದರೂ, ವಿಶೇಷವಾಗಿ ಮರಾಠಾವಾಡಾದ 46 ವಿಧಾನಸಭಾ ಕ್ಷೇತ್ರಗಳಲ್ಲಿ ಅವರು ಯಾವುದೇ ಮ್ಯಾಜಿಕ್ ಮಾಡಲು ವಿಫಲರಾಗಿದ್ದಾರೆ.
ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮರಾಠಾ ಮತ್ತು ಒಬಿಸಿ ಮೀಸಲಾತಿಯ ಬೇಡಿಕೆಗಾಗಿ ನಡೆದ ಪ್ರತಿಭಟನೆಯಿಂದಾಗಿ ದೊಡ್ಡ ಹಿನ್ನಡೆ ಅನುಭವಿಸಿದ್ದ ಬಿಜೆಪಿ, ಶಿವಸೇನೆ ಮತ್ತು ಎನ್ಸಿಪಿಯನ್ನು ಒಳಗೊಂಡ ಮಹಾಯುತಿಗೆ ಮರಾಠಾವಾಡಾದಲ್ಲಿ ಈ ಚುನಾವಣೆಗಳಲ್ಲಿ ದೊಡ್ಡ ಉತ್ತೇಜನ ದೊರೆಕಿದೆ. ಈ ಬಾರಿ ಅದು ಒಟ್ಟು 46 ಸ್ಥಾನಗಳ ಪೈಕಿ ದಾಖಲೆಯ 36 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ ಮತ್ತು ಮಹಾಯುತಿ ವಿರುದ್ಧ ಮತದಾರರನ್ನು ಧೃವೀಕರಣಗೊಳಿಸುವ ಪ್ರಯತ್ನದ ಜರಾಂಗೆ ಪಾಟೀಲ್ ಅವರ ಮರಾಠಾ ಪರ ಕೋಟಾ ವಿಚಾರವು ದಯನೀಯವಾಗಿ ವಿಫಲವಾಗಿದೆ.
ಮಹಾವಿಕಾಸ್ ಅಘಾಡಿಯು ವಿಶೇಷವಾಗಿ ಮರಾಠಾವಾಡಾದಲ್ಲಿ ಬಿಜೆಪಿಯನ್ನು ಸೋಲಿಸಲು ಎಂಡಿಎಂ ಅಂಶವನ್ನು (ಮುಸ್ಲಿಂ ದಲಿತ ಮರಾಠಾ) ಬಳಸಿಕೊಳ್ಳುವ ಭರವಸೆ ಹೊಂದಿತ್ತು. ಆದರೆ, ಇದು ನಿರೀಕ್ಷಿತ ಫಲಿತಾಂಶಗಳನ್ನು ನೀಡಿಲ್ಲ.
ಒಬಿಸಿ ಮೀಸಲಾತಿಯಿಂದ ಕೋಟಾ ಅಭಯ:ಮಹಾಯುತಿ ಸರ್ಕಾರ ಈಗಾಗಲೇ ಮರಾಠಾ ಸಮುದಾಯಕ್ಕೆ ಶೇಕಡಾ 10 ರಷ್ಟು ಮೀಸಲಾತಿ ಒದಗಿಸಿದೆ ಮತ್ತು ಅಧಿಕಾರಕ್ಕೆ ಬಂದ ನಂತರ ಒಬಿಸಿ ಮೀಸಲಾತಿಯಿಂದ ಕೋಟಾ ನೀಡಲಾಗುವುದು ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಚುನಾವಣಾ ರ‍್ಯಾಲಿಗಳಲ್ಲಿ ಪದೇ ಪದೆ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಮರಾಠಾ ಸಮುದಾಯವು ಮಹಾ ವಿಕಾಸ್ ಅಘಾಡಿಯ ಬದಲು ಮಹಾಯುತಿಯ ಬೆಂಬಲಕ್ಕೆ ನಿಂತಿರುವುದು ಕಂಡು ಬಂದಿದೆ. ಮರಾಠಾ, ಧನಗರ್ ಮತ್ತು ಇತರ ಸಮುದಾಯಗಳಿಗೆ ಮೀಸಲಾತಿ ನೀಡಲು ಪ್ರಸ್ತುತ ಶೇಕಡಾ 50 ರಷ್ಟು ಕೋಟಾ ಮಿತಿಯನ್ನು ಹೆಚ್ಚಿಸುವುದಾಗಿ ಅಘಾಡಿ ಹೇಳಿತ್ತು.
ಜಾಣ್ಮೆಯಿಂದ ಆಡಿದ ಬಿಜೆಪಿ:ಮತ್ತೊಂದೆಡೆ ಬಿಜೆಪಿ ತನ್ನ ಆಟವನ್ನು ಅತ್ಯಂತ ಜಾಣ್ಮೆಯಿಂದ ಆಡಿತು. ಜರಾಂಗೆ ಪಾಟೀಲ್ ಅವರ ಬಿಜೆಪಿ ವಿರೋಧಿ ಮತ್ತು ಫಡ್ನವೀಸ್ ವಿರೋಧಿ ನಿಲುವನ್ನು ಎದುರಿಸುವ ಪ್ರಯತ್ನವಾಗಿ ಪಕ್ಷವು ಒಬಿಸಿ ಮತ್ತು ಅದರ ವಿವಿಧ ಉಪಜಾತಿಗಳಲ್ಲಿ ತನ್ನ ಸ್ಥಾನವನ್ನು ಬಲಪಡಿಸಲು ಸರಣಿ ಪ್ರಯತ್ನಗಳನ್ನು ಮಾಡಿತು. ಮರಾಠಾ ಸಮುದಾಯದ ಮತಗಳ ನಷ್ಟವನ್ನು ಸರಿದೂಗಿಸಲು ಕೂಡ ಈ ಕ್ರಮ ಅಗತ್ಯವಾಗಿತ್ತು.
ವಿಧಾನಸಭಾ ಚುನಾವಣೆಯ ರಾಜ್ಯ ಬಿಜೆಪಿ ಉಸ್ತುವಾರಿ ಮತ್ತು ಕೇಂದ್ರ ಸಚಿವ ಭೂಪೇಂದ್ರ ಯಾದವ್ ಅವರು ಹರಿಯಾಣ ಪ್ರಯೋಗದ ಮಾದರಿಯಲ್ಲಿ ಒಬಿಸಿ ಉಪಜಾತಿಗಳಿಗೆ ಸೇರಿದ ಸದಸ್ಯರೊಂದಿಗೆ ಸಭೆಗಳನ್ನು ನಡೆಸಿ ವೈಯಕ್ತಿಕ ಪ್ರಯತ್ನಗಳನ್ನು ಮಾಡಿದರು. ಜರಾಂಗೆ ಪಾಟೀಲ್ ಅವರ ಮರಾಠಾ ಪರ ಹೇಳಿಕೆಗಳನ್ನು ಎದುರಿಸಲು ಬಿಜೆಪಿ ತನ್ನ ಮಾಲಿ, ಧನಗರ್ ಮತ್ತು ವಂಜಾರಿ ಸೂತ್ರವನ್ನು ವಿಭಿನ್ನವಾಗಿ ಜಾರಿಗೆ ತಂದಿತು.
ಕಾಂಗ್ರೆಸ್, ಎಸ್ ಸಿ / ಎಸ್ ಟಿ, ಒಬಿಸಿ ಮತ್ತು ಬುಡಕಟ್ಟು ಜನರ ವಿರೋಧಿ ಎಂದು ಬಿಂಬಿಸಿದ್ದು: ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಮರಾಠಾವಾಡಾ ಮತ್ತು ಮಹಾರಾಷ್ಟ್ರದ ಉಳಿದ ಭಾಗಗಳಲ್ಲಿ ಹಲವಾರು ಸಭೆಗಳನ್ನು ನಡೆಸಿ ಕಾಂಗ್ರೆಸ್ ಪಕ್ಷವನ್ನು ಎಸ್ ಸಿ, ಎಸ್ ಟಿ, ಒಬಿಸಿ ಮತ್ತು ಬುಡಕಟ್ಟು ಜನರ ವಿರೋಧಿ ಎಂದು ಬಿಂಬಿಸಿದರು. ಕೇಂದ್ರದಲ್ಲಿನ ಬಿಜೆಪಿ ನೇತೃತ್ವದ ಸರ್ಕಾರ ಮತ್ತು ರಾಜ್ಯದ ಮಹಾಯುತಿ ಸರ್ಕಾರವು ದೀನದಲಿತರ ಸಬಲೀಕರಣ ಮತ್ತು ಅವರ ಪ್ರಗತಿಗಾಗಿ ವಿವಿಧ ಉಪಕ್ರಮಗಳನ್ನು ಕೈಗೊಂಡಿದೆ ಎಂದು ಅವರು ಜನರಿಗೆ ಮನಮುಟ್ಟುವಂತೆ ವಾದಿಸಿದರು. ಕಾಂಗ್ರೆಸ್ ಮತ್ತು ಇಂಡಿ ಬ್ಲಾಕ್ ವಿಭಜಕ ರಾಜಕೀಯ ಅನುಸರಿಸುತ್ತಿದೆ ಎಂದು ಪ್ರಧಾನಿ ಮತ್ತು ಗೃಹ ಸಚಿವರು ಆರೋಪಿಸಿದರು.
ಜರಾಂಗೆ ಸ್ವಿಚ್ಡ್ ಆನ್ ಆಫ್ ರೀತಿಯ ಕ್ರಮಗಳಿಂದ ಬೇಸತ್ತರೇ ಮತದಾರರು?:ಜರಾಂಗೆ ಪಾಟೀಲ್ ಅವರ ವಿಚಾರಕ್ಕೆ ಬರುವುದಾದರೆ- ಒಮ್ಮೆ ಯೆಸ್ ಮತ್ತೊಮ್ಮೆ ನೋ ಎನ್ನುವ ಅವರ ಸ್ವಿಚ್ಡ್ ಆನ್ ಆಫ್ ರೀತಿಯ ಕ್ರಮಗಳು ಅವರ ಬೆಂಬಲಿಗರಿಗೆ, ವಿಶೇಷವಾಗಿ ಮರಾಠಾ ಸಮುದಾಯಕ್ಕೆ ಸರಿಹೊಂದಲಿಲ್ಲ. ಅವರು ಕೆಲವು ಮರಾಠಾ ಪರ ಕೋಟಾ ಬೆಂಬಲಿಗರನ್ನು ಚುನಾವಣಾ ಕಣದಲ್ಲಿ ಕಣಕ್ಕಿಳಿಸುವುದಾಗಿ ಘೋಷಿಸಿದ್ದರು. ಆದರೆ ನಂತರ ತಮ್ಮ ನಿರ್ಧಾರದಿಂದ ಹಿಂದೆ ಸರಿದರು. ಇದು ಅವರ ಬೆಂಬಲಿಗರನ್ನು ಮತ್ತಷ್ಟು ಗೊಂದಲಕ್ಕೀಡು ಮಾಡಿತು. ತದನಂತರ ಕೆಲ ಸ್ಥಾನಗಳಲ್ಲಿ ಮುಸ್ಲಿಂ, ದಲಿತ ಮತ್ತು ಮರಾಠಾ ಅಭ್ಯರ್ಥಿಗಳನ್ನು ಬೆಂಬಲಿಸುವ ಅವರ ಕರೆ ಕೆಲಸ ಮಾಡಲಿಲ್ಲ. ಇದು ಅಂತಿಮವಾಗಿ ಮಹಾಯುತಿಗೆ ಪ್ರಯೋಜನ ನೀಡಿತು.
ಲೋಕಸಭೆ ಚುನಾವಣೆ ಬಳಿಕ ಎಚ್ಚೆತ್ತುಕೊಂಡ ಬಿಜೆಪಿ:ಮರಾಠಾವಾಡಾದಲ್ಲಿ ಲೋಕಸಭಾ ಚುನಾವಣೆಯಲ್ಲಿ ನೀರಸ ಪ್ರದರ್ಶನದ ನಂತರ ಮಹಾಯುತಿ ತನ್ನ ಕಾರ್ಯಕ್ಷಮತೆಯನ್ನು ಸುಧಾರಿಸಿಕೊಂಡಿದ್ದರೂ, ಮರಾಠಾ ಕೋಟಾ ವಿಷಯ ನ್ಯಾಯಾಲಯದಲ್ಲಿ ಅಂಗೀಕಾರವಾಗುವಂತೆ ನೋಡಿಕೊಳ್ಳಲು ಅದು ಹೆಣಗಬೇಕಿದೆ. ಇದಲ್ಲದೆ, ಒಬಿಸಿ ಕೋಟಾದಿಂದ ಮರಾಠಾ ಸಮುದಾಯಕ್ಕೆ ಮೀಸಲಾತಿ ನೀಡುವಾಗ ಸರ್ಕಾರವು ಒಬಿಸಿ ನಾಯಕರು ಮತ್ತು ಅಂತಹ ಕ್ರಮವನ್ನು ವಿರೋಧಿಸುವ ಎನ್ ಸಿಪಿ ಹಿರಿಯ ನಾಯಕ ಛಗನ್ ಭುಜಬಲ್ ಅವರನ್ನು ಸಮಾಧಾನಪಡಿಸಬೇಕಿದೆ. ಭವಿಷ್ಯದಲ್ಲಿ ತನ್ನ ಹಾದಿಯನ್ನು ರೂಪಿಸುವಾಗ ಅದು ಈ ವಿಷಯದ ಬಗ್ಗೆ ಸೂಕ್ಷ್ಮ ಸಮತೋಲನ ಸಾಧಿಸುವುದು ಅಗತ್ಯ.