ಕರ್ನಾಟಕ

karnataka

ಹಲ್ದ್ವಾನಿ ಹಿಂಸಾಚಾರ: ಇಬ್ಬರು ಬಲಿ, 300ಕ್ಕೂ ಹೆಚ್ಚು ಜನರಿಗೆ ಗಾಯ

By ETV Bharat Karnataka Team

Published : Feb 9, 2024, 9:47 AM IST

Updated : Feb 9, 2024, 12:41 PM IST

ಅಕ್ರಮವಾಗಿ ನಿರ್ಮಿಸಿದ್ದ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಿದ್ದಕ್ಕೆ ಉತ್ತರಾಖಂಡದ ನೈನಿತಾಲ್ ಜಿಲ್ಲೆಯಲ್ಲಿ ಹಿಂಸಾಚಾರ ನಡೆಯುತ್ತಿದೆ. ಪೊಲೀಸರು ಪರಿಸ್ಥಿತಿಯನ್ನು ಹತೋಟಿ ತರಲು ಸೂಕ್ತ ಕ್ರಮಗಳನ್ನು ತೆಗೆದು ಕೊಂಡಿದ್ದಾರೆ.

ಹಲ್ದ್ವಾನಿ ಹಿಂಸಾಚಾರ
ಹಲ್ದ್ವಾನಿ ಹಿಂಸಾಚಾರ

ಹಲ್ದ್ವಾನಿ (ಉತ್ತರಾಖಂಡ) :ಗುರುವಾರ ಉತ್ತರಾಖಂಡದ ನೈನಿತಾಲ್ ಜಿಲ್ಲೆಯ ಹಲ್ದ್ವಾನಿ ಎಂಬಲ್ಲಿ ಅಕ್ರಮ ಧಾರ್ಮಿಕ ಕಟ್ಟಡಗಳ ತೆರವು ಕಾರ್ಯಾಚರಣೆ ವೇಳೆ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಗುಂಡು ಹಾರಿಸಿದ್ದು,ಇಬ್ಬರು ಬಲಿಯಾಗಿದ್ದಾರೆ.

ಹಲ್ದ್ವಾನಿಯಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಿದ ಪೊಲೀಸರ ಕ್ರಮ ಖಂಡಿಸಿದ ಜನರು, ಕಲ್ಲು ತೂರಾಟ ಮಾಡಿ, ಠಾಣೆ ಮತ್ತು ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಉದ್ವಿಗ್ನ ಪರಿಸ್ಥಿತಿ ಉಂಟಾದ ಹಿನ್ನೆಲೆಯಲ್ಲಿ ಪೊಲೀಸರು ಕರ್ಫ್ಯೂ ಜಾರಿ ಮಾಡಿದ್ದರು.

ಈವರೆಗೆ ಪೊಲೀಸರು, ಸಾರ್ವಜನಿಕರು ಮತ್ತು ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ 300 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ 1ರಿಂದ 12ನೇ ತರಗತಿಯ ಎಲ್ಲ ಶಾಲೆಗಳನ್ನು ಇಂದು ಫೆಬ್ರವರಿ 9 ಕಡ್ಡಾಯ ರಜೆ ಘೋಷಿಸಲಾಗಿದೆ. ಸ್ಥಳದಲ್ಲಿ ಶಾಂತಿ ನೆಲೆಗೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಪೊಲೀಸ್​ ಭದ್ರತೆ ಒದಗಿಸಲಾಗಿದೆ.

ಅಮಾಯಕರ ವಿರುದ್ಧ ಕ್ರಮ ಕೈಗೊಳ್ಳಬಾರದು :ಇನ್ನು ಈ ಘಟನೆ ಕುರಿತು ಮಾತನಾಡಿರುವ ಉತ್ತರಾಖಂಡ ಕಾಂಗ್ರೆಸ್ ರಾಜ್ಯಾಧ್ಯಕ್ಷ ಕರಣ್ ಮಹಾರಾ ಅವರು, ಹಲ್ದ್ವಾನಿ ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಅಲ್ಲಿನ ಪರಿಸ್ಥಿತಿ ತೀರಾ ಹದಗೆಡುತ್ತಿದೆ. ಧಾರ್ಮಿಕ ಕಟ್ಟಡ ತೆರವುಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳುವ ಮುನ್ನ ಪೊಲೀಸರು ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕಿತ್ತು. ಈ ಬಗ್ಗೆ ಸರಕಾರ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಆದರೆ, ಇದರ ನೆಪದಲ್ಲಿ ಅಮಾಯಕರ ವಿರುದ್ಧ ಯಾವುದೇ ರೀತಿಯ ಕ್ರಮ ಕೈಗೊಳ್ಳಬಾರದು ಎಂದಿದ್ದಾರೆ.

ಉತ್ತರಾಖಂಡ ಸಿಎಂ ಹೇಳಿದ್ದೇನು? :ತಡರಾತ್ರಿ ಘಟನೆಯ ಗಂಭೀರತೆ ಅರಿತ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್​ ಸಿಂಗ್ ಧಾಮಿ ಡೆಹ್ರಾಡೂನ್‌ನಲ್ಲಿ ಉನ್ನತ ಮಟ್ಟದ ತುರ್ತು ಸಭೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಸಭೆಯ ಬಳಿಕ ಮಾತನಾಡಿದ ಧಾಮಿ, ನ್ಯಾಯಾಲಯದ ಆದೇಶದ ಮೇರೆಗೆ ಜಿಲ್ಲಾಡಳಿತ ತಂಡವು ಹಲ್ದ್ವಾನಿಯ ಬಂಭುಲ್ಪುರ ಪ್ರದೇಶಕ್ಕೆ ಅತಿಕ್ರಮಣ ತೆರವು ಕಾರ್ಯಾರಂಭಿಸಿದೆ. ಕೆಲವರು ಪೊಲೀಸರೊಂದಿಗೆ ವಾಗ್ವಾದ ನಡೆಸಿ ಕಲ್ಲು ತೂರಾಟ ನಡೆಸಿದ್ದಾರೆ. ಕೇಂದ್ರ ಪಡೆಗಳ ಹೆಚ್ಚುವರಿ ತುಕಡಿಗಳನ್ನು ಹಲ್ದ್ವಾನಿಗೆ ಕಳುಹಿಸಲಾಗಿದೆ. ಜನತೆ ಶಾಂತಿ ಕಾಪಾಡಬೇಕೆಂದು ಮನವಿ ಮಾಡಿದ್ದಾರೆ. ಇದೇ ವೇಳೆ, ದಂಗೆಕೋರರು ಮತ್ತು ಬೆಂಕಿ ಹಚ್ಚಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ :ಉತ್ತರಾಖಂಡ: ಅಕ್ರಮ ಧಾರ್ಮಿಕ ಕಟ್ಟಡಗಳ ತೆರವಿಗೆ ಆಕ್ರೋಶ; ಪೊಲೀಸ್‌ ಗುಂಡಿಗೆ ಓರ್ವ ಬಲಿ, ಮೂವರಿಗೆ ಗಾಯ

Last Updated : Feb 9, 2024, 12:41 PM IST

ABOUT THE AUTHOR

...view details