ಗುವಾಹಟಿ(ಅಸ್ಸಾಂ): ಮಣಿಪುರದ ಜಿರಿಬಮ್ ಜಿಲ್ಲೆಯಲ್ಲಿ ನವೆಂಬರ್ 7ರಂದು 31 ವರ್ಷದ ಬುಡಕಟ್ಟು ಮಹಿಳೆಯನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಲಾಗಿತ್ತು. ಮೃತದೇಹದ ಮರಣೋತ್ತರ ಪರೀಕ್ಷಾ ವರದಿ ಇದೀಗ ಬಹಿರಂಗವಾಗಿದ್ದು, ಆಘಾತಕಾರಿ ಅಂಶಗಳು ಹೊರಬಂದಿವೆ. ಮಹಿಳೆಗೆ ಅಸಹನೀಯ ರೀತಿಯ ಚಿತ್ರಹಿಂಸೆ ನೀಡಿರುವುದನ್ನು ವರದಿ ವಿವರವಾಗಿ ತಿಳಿಸಿದೆ. ಮರಣೋತ್ತರ ಪರೀಕ್ಷೆ ಅಸ್ಸಾಂನ ಸಿಲ್ಚರ್‌ನಲ್ಲಿರುವ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನವೆಂಬರ್ 9ರಂದು ನಡೆದಿತ್ತು.
ಮಹಿಳೆಯ ಕೈ, ಕಾಲುಗಳೂ ಸೇರಿದಂತೆ ದೇಹದ ವಿವಿಧ ಭಾಗಗಳು ಕಾಣೆಯಾಗಿದ್ದವು. ಅಷ್ಟೇ ಅಲ್ಲ, ಬಹುತೇಕ ಭಾಗಗಳು ಗುರುತು ಸಿಗದಂತೆ ಸುಟ್ಟು ಕರಕಲಾಗಿದ್ದವು. ಅತ್ಯಂತ ಕ್ರೂರ ರೀತಿಯಲ್ಲಿ ಶಿಕ್ಷಿಸಲಾದ ಪರಿಣಾಮ ಆಕೆ ಸಾವನ್ನಪ್ಪಿರುವುದು ಕಂಡುಬಂದಿದೆ. ದೇಹದ ಶೇ 99ರಷ್ಟು ಭಾಗಗಳು ಬೆಂಕಿಯಿಂದ ಸುಟ್ಟು ಹೋಗಿದ್ದವು. ಬೆಂಕಿಯ ತೀವ್ರತೆಗೆ ಎಲುಬುಗಳೂ ಸುಟ್ಟಿದ್ದವು. ಅದರಲ್ಲಿ ಯಾವುದೇ ಆರೋಗ್ಯಕರ ಅಂಗಾಂಶಗಳೇ ಇರಲಿಲ್ಲ ಎಂದು ವರದಿ ಹೇಳಿದೆ.
ಬಲ ಕಾಲಿನ ಮೇಲ್ಭಾಗ, ಎರಡೂ ಕಾಲುಗಳ ಕೆಳಭಾಗಗಳು ಕಾಣೆಯಾಗಿದ್ದವು. ಮುಖ ರಚನೆಯೇ ಮೃತದೇಹದಲ್ಲಿ ಇರಲಿಲ್ಲ. ಆಕೆಯ ಗುಪ್ತಾಂಗದ ಭಾಗಗಳನ್ನು ಮೈಕ್ರೋಸ್ಕೋಪಿಕ್ ವಿಶ್ಲೇಷಣೆಗೆ ಪಡೆಯಲೂ ಕೂಡಾ ಸಾಧ್ಯವಾಗಿಲ್ಲ. ಗಾಯದ ಗುರುತುಗಳು ದೇಹದ ಸಾಕಷ್ಟು ಒಳಭಾಗಕ್ಕೂ ಹೊಕ್ಕಿದ್ದವು. ಎಡಭಾಗದ ತೊಡೆಗೆ ಲೋಹದ ಮೊಳೆ ಜಡಿಯಲಾಗಿತ್ತು. ಊಹೆಗೂ ನಿಲುಕದ ರೀತಿಯಲ್ಲಿ ಚಿತ್ರಹಿಂಸೆ ನೀಡಿರುವುದು ಮೃತದೇಹದಲ್ಲಿ ಕಂಡುಬಂದಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.