ನವದೆಹಲಿ: ಕಾಶಿಯಲ್ಲಿ ವೈಭವಪೂರಿತ ದೇವ್ ದೀಪಾವಳಿಯನ್ನು ಶುಕ್ರವಾರ ಆಚರಿಸಲಾಗುತ್ತಿದೆ. ಈ ದಿನ 84 ಘಾಟ್ಗಳಲ್ಲಿ 17 ಲಕ್ಷ ಮಣ್ಣಿನ ಹಣತೆಗಳು ಬೆಳಗಲಿದೆ. ಈ ಬಾರಿ ಘಾಟ್ಗಳಲ್ಲಿ ಅಲಂಕರಿಸಿರುವ ಈ ದೀಪಗಳನ್ನು ಮಹಿಳಾ ಸಬಲೀಕರಣಕ್ಕೆ ಸಮರ್ಪಣೆ ಮಾಡುವ ಜೊತೆಗೆ ಖ್ಯಾತ ಉದ್ಯಮಿ ರತನ್ ಟಾಟಾ ಅವರಿಗೆ ಗೌರವ ನಮನ ಸಲ್ಲಿಸಲಾಗುತ್ತದೆ.
ಇದರ ಜೊತೆಗೆ, ಗಂಗಾ ದ್ವಾರ ಮತ್ತು ಚೇತ್ ಸಿಂಗ್ ಘಾಟ್ಗಳಲ್ಲಿ ಲೇಸರ್ ಶೋ ಆಯೋಜಿಸಿದ್ದು, ಪಟಾಕಿ ಸಿಡಿಸಲಾಗುವುದು. ಹಾಗೆಯೇ ದಶಾಶ್ವಮೇಧ ಘಾಟ್ನಲ್ಲಿ ವಿಶ್ವವಿಖ್ಯಾತ ಗಂಗಾ ಆರತಿಗೆ ವ್ಯವಸ್ಥೆ ಮಾಡಲಾಗಿದೆ.
ಈ ವಿಶೇಷ ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾಗಲು ವಾರಣಾಸಿಗೆ ಲಕ್ಷಾಂತರ ಜನರು ಆಗಮಿಸುವ ನಿರೀಕ್ಷೆ ಇದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಕಾರ್ತಿಕ ಪೂರ್ಣಿಮೆಯಂದು ಈ ದೇವ್ ದೀಪಾವಳಿಯನ್ನು ಆಚರಿಸಲಾಗುವುದು. ಈ ವರ್ಷ ಕಾರ್ತಿಕ ಪೂರ್ಣಿಮೆ ನವೆಂಬರ್ 15ರಂದು ಬಂದಿದೆ.
ದೇವ್ ದೀಪಾವಳಿಯನ್ನು ಕಣ್ತುಂಬಿಕೊಳ್ಳಲು ಶೇ 20ರಷ್ಟು ಹೆಚ್ಚು ಪ್ರಮಾಣದಲ್ಲಿ ಪ್ರವಾಸಿಗರು ವಾರಣಾಸಿಗೆ ಆಗಮಿಸುತ್ತಾರೆ. ಕಳೆದ ಬಾರಿಗೆ ಹೋಲಿಸಿದಾಗ ಈ ಬಾರಿ ಸುತ್ತಮುತ್ತಲ ಹೋಟೆಲ್ ಮತ್ತು ಬೋಟ್ಗಳಲ್ಲಿ ಬೇಡಿಕೆ ಹೆಚ್ಚಿದೆ.
ಸ್ಪರ್ಶ ದರ್ಶನ ರದ್ದು: ದೇವ್ ದೀಪಾವಳಿ ಅಂಗವಾಗಿ ಎರಡು ದಿನಗಳ ಕಾಲ ವಾರಣಾಸಿಯಲ್ಲಿ ಶಿವಲಿಂಗ ಸ್ಪರ್ಶ ದರ್ಶನವನ್ನು ರದ್ದು ಮಾಡಲಾಗಿದೆ ಎಂದು ವಿಶ್ವನಾಥ ದೇಗುಲದ ಆಡಳಿತ ಮಂಡಳಿ ಅಧಿಕೃತವಾಗಿ ತಿಳಿಸಿದೆ. ದೇವ್ ದೀಪಾವಳಿ ಅಂಗವಾಗಿ ಇಂದು ವಿಶ್ವನಾಥ ದೇಗುಲಕ್ಕೆ ಹೂವು ಮತ್ತು ಲೈಟ್ಗಳಿಂದ ವಿಶೇಷ ಅಲಂಕಾರ ಮಾಡಲಾಗಿದೆ.
ಎರಡು ದಿನ ಆನ್ಲೈನ್ ಸೇವೆಯೂ ರದ್ದು: ಸ್ಪರ್ಶ ದರ್ಶನದ ಜೊತೆಗೆ ಆನ್ಲೈನ್ ಆರತಿ ಟಿಕೆಟ್ ಸೇವೆಯನ್ನು ರದ್ದು ಮಾಡಲಾಗಿದೆ. ಮಂಗಳಾರತಿ, ಸಪ್ತ ರಿಷಿ ಆರತಿ ಮತ್ತು ಶಯನ ಆರತಿ ಕೂಡ ಟಿಕೆಟ್ ಎರಡು ದಿನ ರದ್ದಾಗಿದೆ. ಎಲ್ಲಾ ವಿಶೇಷ ಪೂಜೆ ಮತ್ತು ಇತರೆ ಪೂಜಾ ಕಾರ್ಯಗಳು ಬುಕ್ ಆಗಿವೆ.
ಏನಿದು ದೇವ್ ದೀಪಾವಳಿ?: ದೇವ್ ದೀಪಾವಳಿಗೆ ಹೆಚ್ಚಿನ ಧಾರ್ಮಿಕ ಮಹತ್ವ ಹೊಂದಿದೆ. ಈ ದಿನ ಶಿವನೂ ರಾಕ್ಷಸ ತ್ರಿಪುರಾಸುರನನ್ನು ವಧೆ ಮಾಡಿ ವಿಜಯಗಳಿಸಿದ. ಈ ಹಿನ್ನೆಲೆಯಲ್ಲಿ ಈ ದಿನವನ್ನು ಕಾಶಿಯಲ್ಲಿ ಅತ್ಯಂತ ಸಂಭ್ರಮದಿಂದ ದೀಪಗಳನ್ನು ಬೆಳಗಿಸುವ ಮೂಲಕ ಆಚರಿಸಲಾಗುವುದು.
ಕಾರ್ಗಿಲ್ ಹುತಾತ್ಮರಿಗೆ ಮಹಾ ಆರತಿ ಸಮರ್ಪಣೆ: ದಶಾಶ್ವಮೇಧ ಘಾಟ್ನಲ್ಲಿ ನಡೆಯುವ ವೈಭವಯುತ ಗಂಗಾ ಆರತಿಯನ್ನು ಕಾರ್ಗಿಲ್ ಯುದ್ಧದ ಹುತಾತ್ಮರಿಗೆ ಸಮರ್ಪಣೆ ಮಾಡಲಾಗುವುದು. ಕಾರ್ಗಿಲ್ ಯುದ್ದ ಬೆಳ್ಳಿ ಮಹೋತ್ಸವ ಹಿನ್ನೆಲೆಯಲ್ಲಿ ದೇಶಕ್ಕಾಗಿ ಹೋರಾಡಿದ ವೀರ ಯೋಧರಿಗೆ ಗೌರವ ಸಲ್ಲಿಸಲಾಗುವುದು. ಈ ಆರತಿಯಲ್ಲಿ 21 ಜನ ಅರ್ಚಕರು ಮತ್ತು 42 ದೇವ ಕನ್ಯೆಯರು ಇರಲಿದ್ದಾರೆ.
ಇದನ್ನೂ ಓದಿ: ದೆಹಲಿಯಲ್ಲಿ ಉಸಿರಾಡುವುದೂ ಕಷ್ಟ! ಕಳಪೆ ವರ್ಗದಲ್ಲೇ ಮುಂದುವರೆದ ವಾಯು ಗುಣಮಟ್ಟ