ಥಾಣೆ (ಮಹಾರಾಷ್ಟ್ರ) :ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ 5 ಕೋಟಿ ರೂಪಾಯಿ ಮೌಲ್ಯದ ತಿಮಿಂಗಿಲ ವಾಂತಿ (ಆಂಬರ್‌ಗ್ರೀಸ್) ಯನ್ನು ವಶಪಡಿಸಿಕೊಂಡ ಪೊಲೀಸರು ವ್ಯಕ್ತಿಯೊಬ್ಬರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ನಿಖರ ಸುಳಿವಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಅಪರಾಧ ಘಟಕದ ತಂಡವು, ಇಲ್ಲಿನ ರಬೋಡಿ ಪ್ರದೇಶದಲ್ಲಿ 53 ವರ್ಷದ ವ್ಯಕ್ತಿಯನ್ನು ಅನುಮಾನದ ಆಧಾರದ ಮೇಲೆ ಬಂಧಿಸಿದೆ. ಈ ವೇಳೆ ಆತನ ಬಳಿ 5.48 ಕೆಜಿ ತೂಕದ ತಿಮಿಂಗಿಲ ವಾಂತಿ ಸಿಕ್ಕಿದೆ. ಅದನ್ನು ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿದ್ದಾರೆ. ಅಂಬರ್ಗ್ರೀಸ್ 5 ಕೋಟಿ ರೂಪಾಯಿ ಮೌಲ್ಯದ್ದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತ ಕಳ್ಳಸಾಗಣೆದಾರನನ್ನು ಪುಣೆ ಮೂಲದ ನಿತೀನ್ ಮುತ್ತಣ್ಣ ಮೊರೆಲು ಎಂದು ಗುರುತಿಸಲಾಗಿದೆ. ಈತನ ವಿರುದ್ಧ ವನ್ಯಜೀವಿ (ರಕ್ಷಣಾ) ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗೆ ತಿಮಿಂಗಿಲ ವಾಂತಿ ಎಲ್ಲಿಂದ ಸಿಕ್ಕಿತು ಮತ್ತು ಅದನ್ನು ಯಾರಿಗೆ ಮಾರಾಟ ಮಾಡಲು ಯೋಜಿಸಿದ್ದ ಎಂಬುದರ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.