ಪಾಲ್ಘರ್ (ಮಹಾರಾಷ್ಟ್ರ):ಮ್ಯಾಟ್ರಿಮೋನಿಯಲ್ನಲ್ಲಿ ಪರಿಚಯ, ವಿಧವೆಯರು, ವಿಚ್ಛೇದಿತರೇ ಟಾರ್ಗೆಟ್, ಮದುವೆಯಾದ ಬಳಿಕ ಮಹಿಳೆಯರ ಹಣ, ಒಡವೆಗಳೊಂದಿಗೆ ನಾಪತ್ತೆ. ಇದು ಮದುವೆಯ ಹೆಸರಿನಲ್ಲಿ ವ್ಯಕ್ತಿಯೊಬ್ಬ ವಂಚಿಸುತ್ತಿದ್ದ ಪರಿ. ಈವರೆಗೆ ಈತ ದೇಶದ ವಿವಿಧ ರಾಜ್ಯಗಳಲ್ಲಿ 20ಕ್ಕೂ ಅಧಿಕ ಮಹಿಳೆಯರಿಗೆ ಪಂಗನಾಮ ಹಾಕಿರುವ ವಿಚಾರ ಹೊರಬಿದ್ದಿದೆ.
ಇತ್ತೀಚಿಗೆ ಮಹಿಳೆಯೊಬ್ಬರನ್ನು ವಿವಾಹವಾಗಿ ಆಕೆಯ ಬೆಲೆಬಾಳುವ ವಸ್ತುವಿನೊಂದಿಗೆ ಪರಾರಿಯಾಗಿದ್ದ. ಆ ಮಹಿಳೆ ನೀಡಿದ ದೂರಿನ ಮೇರೆಗೆ ವಂಚಕನನ್ನು ಮಹಾರಾಷ್ಟ್ರದಲ್ಲಿ ಬಂಧಿಸಲಾಗಿದೆ. ವಿಚಾರಣೆಯ ವೇಳೆ ಆತನ ಮೋಸದ ಜಾಲ ಬಯಲಾಗಿದೆ. ಸದ್ಯ ಆತನನ್ನು ಸ್ಥಳೀಯ ಜೈಲಿನಲ್ಲಿ ಬಂಧಿಸಿಡಲಾಗಿದೆ.
ಪ್ರಕರಣ ವಿವರ:43 ವರ್ಷದ ಫಿರೋಜ್ ನಿಯಾಜ್ ಶೇಖ್ ಮದುವೆ ಹೆಸರಿನಲ್ಲಿ ಮಹಿಳೆಯರನ್ನು ವಂಚಿಸುತ್ತಿದ್ದ ಕಿರಾತಕ. ಥಾಣೆ ಜಿಲ್ಲೆಯ ಕಲ್ಯಾಣ್ ನಗರದ ನಿವಾಸಿಯಾಗಿರುವ ಈತ ವಿವಾಹವಾಗುವುದನ್ನು ಖಯಾಲಿ ಮಾಡಿಕೊಂಡಿದ್ದ. ಆರೋಪಿಯು ಮ್ಯಾಟ್ರಿಮೋನಿಯಲ್ ವೆಬ್ಸೈಟ್ನ ಮೂಲಕ ನಲ್ಲ ಸೋಪಾರ ಮೂಲದ ಮಹಿಳೆಯೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದ. ಬಳಿಕ ಕಳೆದ ವರ್ಷವಷ್ಟೇ ಇಬ್ಬರೂ ವಿವಾಹವಾಗಿದ್ದರು. ಇದಾದ ಬಳಿಕ ಕೆಲ ದಿನಗಳ ನಂತರ ಮಹಿಳೆಗೆ ಸೇರಿದ 6.5 ಲಕ್ಷ ರೂಪಾಯಿ ಮೌಲ್ಯದ ಲ್ಯಾಪ್ಟಾಪ್, ಇತರ ಬೆಲೆಬಾಳುವ ವಸ್ತುಗಳು ಮತ್ತು ನಗದನ್ನು ಕದ್ದು ಪರಾರಿಯಾಗಿದ್ದ.
ಈ ಬಗ್ಗೆ ಮಹಿಳೆ 2023 ರ ನವೆಂಬರ್ನಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ಭಾರತೀಯ ದಂಡ ಸಂಹಿತೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ಬಳಿಕ ಆತ ಪಾಲ್ಘರ್ನಲ್ಲಿ ಇರುವುದನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.