ನವದೆಹಲಿ:ಗಣರಾಜ್ಯೋತ್ಸವದ ಮರುದಿನ ದೆಹಲಿ ವಿಮಾನ ನಿಲ್ದಾಣದಲ್ಲಿ ಭದ್ರತಾ ಲೋಪ ಕಂಡು ಬಂದಿದೆ. ಆಗಂತುಕನೊಬ್ಬ ವಿಮಾನ ನಿಲ್ದಾಣದ ಗೋಡೆ ಹಾರಿ ರನ್‌ವೇ ಪ್ರವೇಶಿಸಿರುವುದು ಬೆಳಕಿಗೆ ಬಂದಿದೆ. ಜನವರಿ 27 ರಂದು ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಲೋಪವು ಹೆಚ್ಚಿನ ಆತಂಕವನ್ನು ಉಂಟುಮಾಡಿದ್ದು, ಪರಿಸ್ಥಿತಿಯನ್ನು ನಿಭಾಯಿಸಲು ತಕ್ಷಣವೇ ಭದ್ರತಾ ಕ್ರಮಗಳನ್ನು ಹೆಚ್ಚಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಆಗಂತುಕನ ಅವಾಂತರ:ವಿಮಾನ ನಿಲ್ದಾಣದ ಅಧಿಕಾರಿಗಳ ಪ್ರಕಾರ, ‘ಏರ್ ಇಂಡಿಯಾ ಪೈಲಟ್ ರಾತ್ರಿ 11.30 ರ ಸುಮಾರಿಗೆ ಲ್ಯಾಂಡಿಂಗ್ ವೇಳೆ ಒಳನುಗ್ಗುವ ಆಗಂತುಕನನ್ನು ನೋಡಿದ್ದಾರೆ. ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದ ನಂತರ ವಿಮಾನವನ್ನು ಪಾರ್ಕಿಂಗ್ಗೆ ಬೇಗ ಕೊಂಡೊಯ್ಯಲಾಯಿತು. ಬಳಿಕ ಪೈಲಟ್ ಆಗಂತುಕನ ಬಗ್ಗೆ ಎಟಿಸಿಗೆ ಮಾಹಿತಿ ನೀಡಿದ್ದಾರೆ. ಎಟಿಸಿ ತಕ್ಷಣವೇ ಏರ್‌ಪೋರ್ಟ್ ಆಪರೇಷನ್ ಕಂಟ್ರೋಲ್ ಸೆಂಟರ್ (ಎಒಸಿಸಿ)ಗೆ ಎಚ್ಚರಿಕೆ ನೀಡಿತ್ತು. ಮಾಹಿತಿ ಸಿಕ್ಕ ತಕ್ಷಣವೇ ಸಿಐಎಸ್‌ಎಫ್ ತಕ್ಷಣ ಕ್ರಮ ಕೈಗೊಂಡಿತು.
ಮಾದಕ ವ್ಯಸನಿಯಾಗಿದ್ದ ಆರೋಪಿ: ಒಳನುಗ್ಗಿದ ಅಪರಿಚಿತ ವ್ಯಕ್ತಿಯನ್ನು ಸಿಐಎಸ್ಎಫ್ ಹಿಡಿದು ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದಾರೆ. ವಿಮಾನ ನಿಲ್ದಾಣದ ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ಪ್ರತಿಕ್ರಿಯಿಸಿ, ‘ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಆರೋಪಿಯು ಮಾದಕ ವ್ಯಸನಿ ಮತ್ತು ಹರಿಯಾಣದ ನುಹ್ ಜಿಲ್ಲೆಯ ನಿವಾಸಿ ಎಂದು ತಿಳಿದುಬಂದಿದೆ’ ಎಂದು ಹೇಳಿದರು.
ಪೊಲೀಸ್ ಅಧಿಕಾರಿ ಹೇಳಿದ್ದೇನು?:ವಿಮಾನ ನಿಲ್ದಾಣದ ಭದ್ರತೆಯು ಸಿಐಎಸ್ಎಫ್ ಮತ್ತು DIAL ಅಡಿಯಲ್ಲಿದೆ. ದೆಹಲಿ ಪೊಲೀಸರ ಭದ್ರತೆಯಲ್ಲಿ ಯಾವುದೇ ಲೋಪವಿಲ್ಲ. ವಿಶೇಷವಾಗಿ ಗಣರಾಜ್ಯೋತ್ಸವ ಮತ್ತು ವಿವಿಐಪಿಗಳ ಆಗಮನ, ನಿರ್ಗಮನದ ಕಾರಣ ಹೈ ಅಲರ್ಟ್‌ನಲ್ಲಿರುವ ದೆಹಲಿಯ ವಿಮಾನ ನಿಲ್ದಾಣವು ಒಳನುಗ್ಗುವ ಅಪರಿಚಿತರಿಂದ ತೊಂದರೆಗೀಡಾಗಿದೆ. ಈ ಕಾರಣದಿಂದಾಗಿ, ಭದ್ರತೆ ಮತ್ತು ಸುರಕ್ಷತಾ ಏಜೆನ್ಸಿಗಳ ಕಡೆಯಿಂದ ನಿಗಾ ಇಡಲಾಗಿದೆ. ಈ ಸಂಬಂಧ ಆಂತರಿಕ ಸಮಿತಿಯನ್ನು ರಚಿಸಲಾಗಿದ್ದು, ಪರಿಸ್ಥಿತಿಯನ್ನು ನಿಭಾಯಿಸಲು ತನಿಖೆ ನಡೆಸಲಾಗುತ್ತಿದೆ ಎಂದು ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಘಟನೆಯ ಬಗ್ಗೆ ಎಚ್ಚೆತ್ತ ಅಧಿಕಾರಿಗಳು: ಇನ್ನು ಈ ಘಟನೆಯನ್ನು ಅಧಿಕಾರಿಗಳು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ. ಇದನ್ನು ದೊಡ್ಡ ಪ್ರಮಾಣದ ಭದ್ರತಾ ಲೋಪವೆಂದು ಪರಿಗಣಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ರನ್ವೇಗೆ ಒಳನುಗ್ಗುವವರ ಅನಧಿಕೃತ ಪ್ರವೇಶದ ಬಗ್ಗೆ ಸಿಐಎಸ್ಎಫ್, ವಿಮಾನ ನಿಲ್ದಾಣ ಪೊಲೀಸರು ಮತ್ತು DIAL ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ಹೆಡ್ ಕಾನ್‌ಸ್ಟೇಬಲ್ ಅಮಾನತು: ಅತಿಸೂಕ್ಷ್ಮ ಪ್ರದೇಶವಾಗಿರುವ ಇಂದಿರಾಗಾಂಧಿ ಅಂತಾರಾಷ್ಟ್ರೀಯ (IGI) ವಿಮಾನ ನಿಲ್ದಾಣದಲ್ಲಿ ಭದ್ರತೆಯ ಜವಾಬ್ದಾರಿಯನ್ನು ಹೊಂದಿರುವ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF), ಕರ್ತವ್ಯ ಲೋಪದ ಆರೋಪದ ಮೇಲೆ ಹೆಡ್ ಕಾನ್‌ಸ್ಟೇಬಲ್‌ನನ್ನು ಅಮಾನತುಗೊಳಿಸಿದೆ. ಅರೆಸೈನಿಕ ಪಡೆ ಅತಿಸೂಕ್ಷ್ಮ ನಾಗರಿಕ ವಿಮಾನಯಾನ ಸೌಲಭ್ಯದಲ್ಲಿ ಗಂಭೀರ ಭದ್ರತಾ ಉಲ್ಲಂಘನೆಯ ಬಗ್ಗೆ ವಿಚಾರಣೆಯನ್ನು ಪ್ರಾರಂಭಿಸಿತು ಮತ್ತು ಆ ದಿನ ಕರ್ತವ್ಯದಲ್ಲಿದ್ದ ಹೆಡ್ ಕಾನ್‌ಸ್ಟೇಬಲ್‌ನನ್ನು ಅಮಾನತುಗೊಳಿಸಿದೆ.
ಓದಿ:ಚೀನಾದ 33 ಮಿಲಿಟರಿ ವಿಮಾನ, 6 ಹಡಗುಗಳನ್ನು ಪತ್ತೆ ಹಚ್ಚಿದ ತೈವಾನ್