ಕೋಲ್ಕತ್ತಾ (ಪಶ್ಚಿಮ ಬಂಗಾಳ):ವಿವಿಧ ಸಮಾಜ, ಜನ ಕಲ್ಯಾಣ ಯೋಜನೆಗಳ ಅನುದಾನ ಬಾಕಿ ಇರುವುದನ್ನು ಖಂಡಿಸಿ ಕೇಂದ್ರ ಸರ್ಕಾರ ವಿರುದ್ಧ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶುಕ್ರವಾರ ರಾಜ್ಯ ರಾಜಧಾನಿ ಕೋಲ್ಕತ್ತಾದಲ್ಲಿ ಧರಣಿ ಆರಂಭಿಸಿದ್ದಾರೆ. ಬಾಕಿ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಬಿ.ಆರ್.ಅಂಬೇಡ್ಕರ್ ಪ್ರತಿಮೆಯ ಮುಂದೆ ತಮ್ಮ ಟಿಎಂಸಿ ಪಕ್ಷದ ನಾಯಕರೊಂದಿಗೆ ಸಿಎಂ ಮಮತಾ ಧರಣಿ ಶುರು ಮಾಡಿದ್ದಾರೆ. ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ (ಮನರೇಗಾ) ಮತ್ತು ಪ್ರಧಾನಮಂತ್ರಿ ಆವಾಸ್ ಯೋಜನೆ ಸೇರಿದಂತೆ ವಿವಿಧ ಕಲ್ಯಾಣ ಯೋಜನೆಗಳಿಂದ ರಾಜ್ಯಕ್ಕೆ ಬರಬೇಕಾದ ಸಾವಿರಾರು ಕೋಟಿ ರೂಪಾಯಿ ಅನುದಾನವನ್ನು ಬಾಕಿ ಉಳಿಸಿಕೊಂಡಿದೆ ಎಂದು ಅವರು ಆರೋಪಿಸಿದ್ದಾರೆ.
ಸಿಎಜಿ ವರದಿ ಕುರಿತು ಪ್ರಧಾನಿಗೆ ಪತ್ರ - ಮಮತಾ:ಮತ್ತೊಂದೆಡೆ, ಆಡಳಿತದ ರಾಜ್ಯದಲ್ಲಿ ಸುಮಾರು 2 ಲಕ್ಷ ಕೋಟಿ ರೂ.ಗಳ ಒಟ್ಟು ಮೊತ್ತದ ಹಗರಣಗಳು ನಡೆದಿವೆ ಎಂದು ಬಿಜೆಪಿ ಆರೋಪಿಸಿದ್ದು, ಈ ಕುರಿತ ಸಿಎಜಿ ವರದಿ ಮಾಹಿತಿ ಇದೆ ಎಂದು ಹೇಳಿದೆ. ಆದರೆ, ಧರಣಿಯಲ್ಲಿ ಮಾತನಾಡಿದ ಸಿಎಂ ಮಮತಾ, ಈ ಆರೋಪವನ್ನು ತಳ್ಳಿಹಾಕಿದರು. ಅಲ್ಲದೇ, ಈ ಮಾಹಿತಿಯು ಸುಳ್ಳು ಮತ್ತು ತಪ್ಪುಗಳಿಂದ ಕೂಡಿದೆ ಎಂದು ತಿಳಿಸಿದರು.