ಹೊಸದಿಲ್ಲಿ/ಕೋಲ್ಕತ್ತಾ:ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನವದೆಹಲಿಯಲ್ಲಿ ಇಂದು ನಡೆಯುತ್ತಿದ್ದ ನೀತಿ ಆಯೋಗದ 9ನೇ ಆಡಳಿತ ಮಂಡಳಿ ಸಭೆಯಿಂದ ಅರ್ಧಕ್ಕೆ ಹೊರ ಬಂದಿದ್ದಾರೆ. ಸಭೆಯಿಂದ ಹೊರಗೆ ಬಂದ ನಂತರ ಸುದ್ದಿಗಾರರೊಂದಿಗೆ ಸಿಡುಕಿನಲ್ಲೇ ಮಾತನಾಡಿದ ಮಮತಾ ಬ್ಯಾನರ್ಜಿ, ''ನಾನು ಮಾತನಾಡುವಾಗ ಮೈಕ್ ಆಫ್ ಮಾಡಲಾಗಿತ್ತು. ಹಾಗಾಗಿ ಅರ್ಧದಲ್ಲೇ ಸಭೆಯಿಂದ ಹೊರಬಂದೆ'' ಎಂದು ಆರೋಪ ಮಾಡಿದ್ದಾರೆ.
''ನನಗೆ ಐದು ನಿಮಿಷ ಕೂಡ ಮಾತನಾಡಲು ಅವಕಾಶ ನೀಡಲಿಲ್ಲ. ನಾನು ಮಾತನಾಡುತ್ತಿದ್ದ ನನ್ನ ಮೈಕ್ರೊಫೋನ್ ಸ್ವಿಚ್ ಆಫ್ ಮಾಡುವ ಮೂಲಕ ನನ್ನನ್ನು ಅವಮಾನಿಸಲಾಗಿದೆ'' ಎಂದು ಅವರು ಹೇಳಿದ್ದಾರೆ.
ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ನಡೆದ ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸಿದ ವಿರೋಧ ಪಕ್ಷದ ಆಡಳಿತದ ರಾಜ್ಯದಿಂದ ಏಕೈಕ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಗಿದ್ದರು. ಸಭೆಯಲ್ಲಿ ಪಶ್ಚಿಮ ಬಂಗಾಳಕ್ಕೆ ಕೇಂದ್ರ ಸರ್ಕಾರ ಅನುದಾನದ ಹಣವನ್ನು ನಿರಾಕರಿಸಿದ ವಿಷಯವನ್ನು ಪ್ರಸ್ತಾಪಿಸಿದಾಗ ತಮ್ಮ ಮೈಕ್ ಅನ್ನು ಮ್ಯೂಟ್ ಮಾಡಲಾಗಿದೆ ಎಂದು ಅವರು ಆರೋಪ ಮಾಡಿದ್ದಾರೆ.
ದೆಹಲಿಗೆ ಹೊರಡುವ ಮುನ್ನ ಶುಕ್ರವಾರ, ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ್ದ ಮಮತಾ ಬ್ಯಾನರ್ಜಿ, ಸಭೆಯಲ್ಲಿ ಭಾಗವಹಿಸುವೆ. ತಾರತಮ್ಯ ಬಜೆಟ್ ಮತ್ತು ಬಂಗಾಳ ಸೇರಿದಂತೆ ಪ್ರತಿಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳನ್ನು ವಿಭಜಿಸುವ ಪಿತೂರಿ ವಿರುದ್ಧ ಪ್ರಸ್ತಾಪಿಸಿ ಪ್ರತಿಭಟಿಸುವೆ. ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಕೂಡ ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದ್ದರು. ಆದರೆ, ಇಂದು ನಡೆದ ಸಭೆಯಲ್ಲಿ ಅವರು ಕಾಣಿಸಿಕೊಳ್ಳಲಿಲ್ಲ.
"ಕೆಲವು ರಾಜ್ಯಗಳ ಮುಖ್ಯಮಂತ್ರಿಗಳಿಗೆ 20 ನಿಮಿಷಗಳ ಕಾಲ ಮಾತನಾಡಲು ಅವಕಾಶ ನೀಡಲಾಗಿದೆ. ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುಗೆ ಮಾತನಾಡಲು 20 ನಿಮಿಷ ನೀಡಲಾಯಿತು. ಅಸ್ಸಾಂ, ಗೋವಾ, ಛತ್ತೀಸ್‌ಗಢದ ಮುಖ್ಯಮಂತ್ರಿಗಳು 10 ರಿಂದ 12 ನಿಮಿಷಗಳ ಕಾಲ ಮಾತನಾಡಿದರು. ಆದರೆ, ತಮಗೆ ಐದು ನಿಮಿಷಕ್ಕಿಂತ ಹೆಚ್ಚು ಮಾತನಾಡಲು ಅವಕಾಶ ನೀಡಲಿಲ್ಲ. ಹಾಗಾಗಿ ನಾನು ನನ್ನ ಪ್ರತಿಭಟನೆಯನ್ನು ದಾಖಲಿಸಿ ಹೊರಬಂದೆ. ಸಭೆಯಲ್ಲಿ ಪ್ರತಿ ಪಕ್ಷದ ಏಕೈಕ ಪ್ರತಿನಿಧಿಯಾಗಿ ಭಾಗಿಯಾಗಿದ್ದೆ. ಕೆಲವು ವಿಷಯಗಳ ಬಗ್ಗೆ ಪ್ರಸ್ತಾಪ ಮಾಡುವ ಇಂಗಿತ ಇತ್ತು. ಆದರೆ, ನಾನು ಅದನ್ನು ಹೇಳುವ ಮೊದಲೇ ನನ್ನ ಮೈಕ್ರೊಫೋನ್ ಸ್ವಿಚ್ಡ್ ಆಫ್ ಮಾಡಲಾಗಿತ್ತು. ಭವಿಷ್ಯದಲ್ಲಿ, ನಾನು ಇನ್ನು ಮುಂದೆ ನೀತಿ ಆಯೋಗದ ಯಾವುದೇ ಸಭೆಗೆ ಹಾಜರಾಗುವುದಿಲ್ಲ" ಎಂದು ಮಮತಾ ಬ್ಯಾನರ್ಜಿ ಪ್ರತಿಜ್ಞೆ ಮಾಡಿದರು.
ಇದನ್ನೂ ಓದಿ:ಪ್ರತಿಭಟನೆ ದಾಖಲಿಸಲು ನೀತಿ ಆಯೋಗದ ಸಭೆಗೆ ಹಾಜರಾಗುವೆ: ಸಿಎಂ ಮಮತಾ ಬ್ಯಾನರ್ಜಿ - NITI Aayog Meet