ನವದೆಹಲಿ:ಪೂರ್ವ ದೆಹಲಿಯ ವಿವೇಕ್ ವಿಹಾರ್ ಪ್ರದೇಶದಲ್ಲಿರುವಬೇಬಿ ಕೇರ್ ಆಸ್ಪತ್ರೆಯಲ್ಲಿ ಶನಿವಾರ ರಾತ್ರಿ ಭಾರೀ ಬೆಂಕಿ ಅವಘಢ ಸಂಭವಿಸಿದ್ದು, 7 ಹಸುಗೂಸುಗಳು ಸಾವನ್ನಪ್ಪಿವೆ. ರಾತ್ರಿ 11:32ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ 12 ನವಜಾತ ಶಿಶುಗಳನ್ನು ರಕ್ಷಿಸಿದರು. ಈ ಪೈಕಿ 6 ಮಕ್ಕಳು ಸಾವನ್ನಪ್ಪಿದ್ದು, 6 ಮಕ್ಕಳ ಪರಿಸ್ಥಿತಿ ಗಂಭೀರವಾಗಿದೆ.
ಇದೀಗ ಅಗ್ನಿಶಾಮಕ ದಳ ಬೆಂಕಿಯನ್ನು ಹತೋಟಿಗೆ ತಂದಿದೆ. ಬೆಂಕಿಯ ಕೆನ್ನಾಲಿಗೆಗೆ ಆಸ್ಪತ್ರೆ ಸಂಪೂರ್ಣ ಸುಟ್ಟು ಕರಕಲಾಗಿದೆ. ಪಕ್ಕದ ಕಟ್ಟಡಕ್ಕೂ ಬೆಂಕಿ ತಗುಲಿದೆ. ಘಟನೆಯಲ್ಲಿ 11-12 ಜನರನ್ನು ರಕ್ಷಿಸಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಕಿಗೂ ಮುನ್ನ ಭಾರೀ ಪ್ರಮಾಣದ ಸ್ಫೋಟ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಆಸ್ಪತ್ರೆಯ ಹೊರಭಾಗದಲ್ಲಿದ್ದ ಆ್ಯಂಬುಲೆನ್ಸ್‌ಗಳಿಗೆ ಆಮ್ಲಜನಕ ತುಂಬಿಸುತ್ತಿದ್ದಾಗ ಸಿಲಿಂಡರ್ ಸ್ಫೋಟಗೊಂಡಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಮೊದಲು ಆಸ್ಪತ್ರೆಗೆ ಬೆಂಕಿ ತಗುಲಿ ಬಳಿಕ ಪಕ್ಕದ ಕಟ್ಟಡಕ್ಕೂ ವಿಸ್ತರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ದೆಹಲಿ ವಿಧಾನಸಭಾ ಸ್ಪೀಕರ್ ರಾಮನಿವಾಸ್ ಗೋಯಲ್ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.