ಶ್ರೀನಗರ:ಶ್ರೀನಗರದ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಗುರುವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಇಬ್ಬರು ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸಂತಾಪ ಸೂಚಿಸಿದ್ದಾರೆ. 'ಈ ಘಟನೆ ಹೃದಯ ವಿದ್ರಾವಕ' ಎಂದು ಕರೆದಿರುವ ಸಿಎಂ ಅಬ್ದುಲ್ಲಾ, ಅಪಘಾತ ದೃಶ್ಯ ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಶ್ರೀನಗರ ಬೈಪಾಸ್‌ನ ಟೆಂಗ್‌ಪೋರಾ ಬಳಿ ಗುರುವಾರ ರಸ್ತೆಯಲ್ಲಿ ನಿಂತಿದ್ದ ಟಿಪ್ಪರ್‌ಗೆ ವೇಗವಾಗಿ ಬಂದ ಕಾರು (ಥಾರ್ ವಾಹನ) ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಮೃತರನ್ನು ಲಾಲ್ ಬಜಾರ್‌ನ ಹಮ್ಮದ್ ಶೋಕತ್ ವಾನಿ ಮತ್ತು ರಾವಲ್ಪೋರಾದ ಅಜೀಮ್ ಸೋಫಿ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಲಾಲ್ ಬಜಾರ್ ಬಾಗ್ನ ಐಸಾ ಗನಿ ಎಂಬ ಯುವಕ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೂವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು.
ಮೃತ ಮತ್ತು ಗಾಯಗೊಂಡ ವಿದ್ಯಾರ್ಥಿಗಳು ಶ್ರೀನಗರದ ದೆಹಲಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ವೇಗವಾಗಿ ಬಂದ ಥಾರ್ ವಾಹನ ಮತ್ತು ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಘಟನೆಯ ಕುರಿತು ಪರಿಶೀಲಿಸಲಾಗುತ್ತಿದೆ. ಘಟನೆಯಲ್ಲಿ ಪ್ರಯಾಣಿಕರ ಕ್ಯಾಬ್‌ಗೂ ಡಿಕ್ಕಿ ಹೊಡೆದಿದೆ' ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 'ಭೀಕರ ಅಪಘಾತದಲ್ಲಿ ಮೃತಪಟ್ಟ ಯುವಕರ ಅಗಲಿಕೆಯನ್ನು ತಡೆದುಕೊಳ್ಳುವ ಶಕ್ತಿಯನ್ನು ಅಲ್ಲಾ ಅವರ ಕುಟುಂಬಸ್ಥರಿಗೆ ನೀಡಲಿ. ಅವರಿಗೆ ನನ್ನ ಸಂತಾಪಗಳು. ಅಲ್ಲಾ ಅವರಿಗೆ ಒಳ್ಳೆಯದನ್ನು ಮಾಡಲಿ' ಎಂದು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ತಮ್ಮ ಎಕ್ಸ್ ಖಾತೆಯಲ್ಲಿ ಸಂತಾಪ ಸೂಚಿಸಿದ್ದಾರೆ.