ಪುಣೆ (ಮಹಾರಾಷ್ಟ್ರ):"ಕೇರಳ 'ಮಿನಿ ಪಾಕಿಸ್ತಾನ' ಇದ್ದಂತೆ. ಹೀಗಾಗಿ, ಕಾಂಗ್ರೆಸ್ನ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಗೆಲುವು ಸಾಧಿಸಿದರು. ಅವರಿಗೆ ಭಯೋತ್ಪಾದಕ ಸಂಘಟನೆಗಳು ಬೆಂಬಲ ನೀಡಿದ್ದವು" ಎಂದು ಮಹಾರಾಷ್ಟ್ರದ ಸಚಿವ ನಿತೇಶ್ ರಾಣೆ ಸೋಮವಾರ ಆರೋಪಿಸಿದ್ದಾರೆ. ಇದೀಗ, ಈ ಹೇಳಿಕೆ ವಿವಾದದ ಕಿಡಿ ಹೊತ್ತಿಸಿದೆ.
ಪುಣೆ ಜಿಲ್ಲೆಯ ಪುರಂದರ ತಾಲೂಕಿನಲ್ಲಿ ನಡೆದ ಅಫ್ಜಲ್ಖಾನ್ ವಿರುದ್ಧ ಛತ್ರಪತಿ ಶಿವಾಜಿಯ ಐತಿಹಾಸಿಕ ಗೆಲುವಿನ ಸಂಭ್ರಮದ ವರ್ಷಾಚರಣೆ ಕಾರ್ಯಕ್ರಮದಲ್ಲಿ ರಾಣೆ ಅವರು ಮಾತನಾಡಿದ್ದು, "ಕೇರಳವು ಮಿನಿ ಪಾಕಿಸ್ತಾನವಾಗಿದೆ. ಎಲ್ಲ ಭಯೋತ್ಪಾದಕರು ಕಾಂಗ್ರೆಸ್ ಪರ ಮತ ಚಲಾಯಿಸಿದ್ದಾರೆ. ಹೀಗಾಗಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಗೆಲುವು ಸಾಧಿಸಿದರು. ಇವರೆಲ್ಲಾ ಭಯೋತ್ಪಾದಕರ ಬೆಂಬಲದಿಂದ ಸಂಸದರಾಗಿದ್ದಾರೆ" ಎಂದು ದೂರಿದರು.
ಕಾಂಗ್ರೆಸ್ ವಿರೋಧ:ಸಚಿವ ರಾಣೆ ನೀಡಿದ ಹೇಳಿಕೆಯು ವಿವಾದ ಸ್ವರೂಪ ಪಡೆದುಕೊಂಡಿದೆ. ಇದನ್ನು ಕಾಂಗ್ರೆಸ್ ಖಂಡಿಸಿದ್ದು, ಮುಂಬರುವ ಚುನಾವಣೆಗಳಲ್ಲಿ ಬಿಜೆಪಿ ಕೇರಳದಲ್ಲಿ ಸ್ಪರ್ಧೆ ಮಾಡುತ್ತದೆಯೋ ಇಲ್ಲವೋ ಎಂಬುದನ್ನು ಆ ಪಕ್ಷವು ದೃಢಪಡಿಸಬೇಕು. ದೇಶದ ಭಾಗವಾಗಿರುವ ರಾಜ್ಯವನ್ನು ಮಿನಿ ಪಾಕಿಸ್ತಾನಕ್ಕೆ ಹೋಲಿಸಿದ್ದು ನಾಯಕರ ಉದ್ಧಟತನ ಎಂದು ಕಿಡಿಕಾರಿದೆ.