ನಾಗ್ಪುರ(ಮಹಾರಾಷ್ಟ್ರ):ವಿಮಾನಗಳಿಗೆ ಹುಸಿ ಬಾಂಬ್ ಕರೆ ಮಾಡುವ ಮೂಲಕ ಆತಂಕ ಮೂಡಿಸುತ್ತಿದ್ದ 35 ವರ್ಷದ ವ್ಯಕ್ತಿಯನ್ನು ಮಹಾರಾಷ್ಟ್ರದ ನಾಗ್ಪುರ ಪೊಲೀಸರು ಬಂಧಿಸಿದ್ದಾರೆ.
ಜಗದೀಶ್ ಉಯ್ಕೆ ಬಂಧಿತ ಆರೋಪಿ. ಈತನನ್ನು ಗೊಂಡಿಯಾದಲ್ಲಿ ಬಂಧಿಸಲಾಗಿದೆ. ಈತ 2021ರಲ್ಲಿ ಭಯೋತ್ಪಾದನೆ ಕುರಿತು ಪುಸ್ತಕ ಬರೆದಿದ್ದು ಪೊಲೀಸರು ಬಂಧಿಸಿದ್ದರು.
ಇತ್ತೀಚಿಗೆ ವಿಮಾನಗಳಿಗೆ ಬೆದರಿಕೆ ಸಂದೇಶ ಬರುತ್ತಿರುವುದು ಹೆಚ್ಚಾಗುತ್ತಿದ್ದು, ವಿಮಾನಯಾನ ಸಂಸ್ಥೆಗಳು ಮತ್ತು ಪೊಲೀಸರಲ್ಲಿ ಆತಂಕ ಸೃಷ್ಟಿಯಾಗಿತ್ತು. ವಿಮಾನಗಳ ಹಾರಾಟದಲ್ಲಿ ವಿಳಂಬ ಮತ್ತು ಮಾರ್ಗ ಬದಲಾವಣೆಯಿಂದ ಸಾರ್ವಜನಿಕರು ತೀವ್ರ ಸಮಸ್ಯೆಗೆ ಒಳಗಾಗಿದ್ದರು. ಈ ಪ್ರಕರಣವನ್ನು ನಾಗರಿಕ ವಿಮಾನಯಾನ ಸಚಿವಾಲಯ ಗಂಭೀರವಾಗಿ ಪರಿಗಣಿಸಿದೆ.
ಈ ಕುರಿತು ತನಿಖೆ ನಡೆಸುವಾಗ ಉಯ್ಕೆ ಎಂಬಾತ ಇಮೇಲ್ ಮೂಲಕ ಈ ರೀತಿ ಸಂದೇಶ ರವಾನಿಸುತ್ತಿದ್ದ ಎಂದು ತಿಳಿದು ಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಡಿಸಿಪಿ ಶ್ವೇತ ಖೇಡ್ಕರ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.