ಬೆಳಗಾವಿ: ''ಪ್ರಭಾಕರ್ ಕೋರೆ ಅವರನ್ನು ನಾವು ಕಾಂಗ್ರೆಸ್ ಪಕ್ಷಕ್ಕೆ ಕರೆದೂ ಇಲ್ಲ, ಅವರು ಬರುವುದೂ ಇಲ್ಲ. ಇದೊಂದು ಸೌಹಾರ್ದಯುತ ಭೇಟಿ ಅಷ್ಟೇ'' ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.
ರಾಜ್ಯಸಭಾ ಮಾಜಿ ಸದಸ್ಯ, ಕೆಎಲ್ಇ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ್ ಕೋರೆ ಅವರ ಮನೆಗೆ ಸೋಮವಾರ (ಜ.20) ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ನೀಡಿದ್ದರು. ನಂತರ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ''ಪ್ರಭಾಕರ್ ಕೋರೆ ಅವರು ನಮಗೆ ಶಾಶ್ವತ ಗೆಳೆಯರು. ಯಾವುದೇ ಸರ್ಕಾರವಿದ್ದರೂ ಅವರ ಸಂಸ್ಥೆಗಳಿಂದ ಸಹಕಾರ ನೀಡುತ್ತಾರೆ. ಗಾಂಧಿ ಭಾರತ ಕಾರ್ಯಕ್ರಮವಿರುವ ಕಾರಣ ಗಣ್ಯರು ಉಳಿದುಕೊಳ್ಳಲು ಅವರ ಶಿಕ್ಷಣ ಸಂಸ್ಥೆಗಳಿಂದ 170ಕ್ಕೂ ಹೆಚ್ಚು ಕೊಠಡಿಗಳನ್ನು ನೀಡಿದ್ದಾರೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಂಸ್ಥೆಯಿಂದ ಬೇಕಾದ ಸಹಾಯ ಮಾಡುತ್ತಿದ್ದಾರೆ'' ಎಂದರು.
''ಈ ಕಾರಣಕ್ಕೆ ಅವರ ಮನೆಗೆ ಬಂದು ಸೌಹಾರ್ದಯುತ ಭೇಟಿ ನೀಡಿ, ಊಟ ಮಾಡಿದೆ. ಒಳ್ಳೆಯ ಜೋಳದ ರೊಟ್ಟಿ ಊಟ ನೀಡಿದ್ದಾರೆ. ಜೋಳವನ್ನು ತಿನ್ನುವವನು ಜಟ್ಟಿಯಂತೆ ಆಗುವನು ಎನ್ನುವ ಮಾತಿದೆ. ಈ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಕೋರೆ ಅವರ ಕುಟುಂಬ ದೊಡ್ಡ ಕೊಡುಗೆ ನೀಡಿದೆ. ಸ್ವಾತಂತ್ರ್ಯ ಚಳವಳಿಗೆ ಧನ ಸಹಾಯ ಮಾಡಿದೆ. ಪ್ರಭಾಕರ್ ಕೋರೆ ಅವರ ತಂದೆ ಕೂಡ ಸ್ವಾತಂತ್ರ್ಯ ಹೋರಾಟಗಾರರು'' ಎಂದು ಡಿ.ಕೆ. ಶಿವಕುಮಾರ್ ಶ್ಲಾಘಿಸಿದರು.
ಕೋರೆ ಅವರ ಸಾಮರ್ಥ್ಯಕ್ಕೆ ತಕ್ಕಂತೆ ಸ್ಥಾನಗಳು ಸಿಗಲಿಲ್ಲ ಅಲ್ಲವೇ ಎಂಬ ಮಾಧ್ಯಮಗಳ ಪ್ರಶ್ನೆಗೆ, ''ಈ ಪ್ರಶ್ನೆಯನ್ನು ಬಿಜೆಪಿಯವರ ಬಳಿ ಕೇಳಿ'' ಎಂದು ಮಾರ್ಮಿಕವಾಗಿ ಹೇಳಿದರು.
ಮಹಾತ್ಮ ಗಾಂಧಿ ಹತ್ಯೆಯಲ್ಲಿ ನೆಹರು ಅವರ ಕೈವಾಡವಿತ್ತು ಎಂದು ಯತ್ನಾಳ್ ಹೇಳಿಕೆಗೆ ''ನಮ್ಮ ಎಂ.ಬಿ. ಪಾಟೀಲ್ ಅವರ ಆಸ್ಪತ್ರೆಗೆ ದಾಖಲಿಸಿಕೊಳ್ಳಿ ಎಂದು ಅವರಿಗೆ ಹೇಳುವೆ. ಇಲ್ಲವೇ ಹುಚ್ಚಾಸ್ಪತ್ರೆಗೆ ಸೇರಿಸಲು ಏರ್ಪಾಟು ಮಾಡೋಣ'' ಎಂದು ಡಿಕೆಶಿ ಲೇವಡಿ ಮಾಡಿದರು.
ಇದನ್ನೂ ಓದಿ: ಹಿಂದೆ ಧರ್ಮಸಿಂಗ್, ಸಿದ್ದರಾಮಯ್ಯ ಕಾಲದಲ್ಲೂ ತ್ಯಾಗ ಮಾಡಿದ್ದೇನೆ: ಡಿಸಿಎಂ ಡಿಕೆಶಿ ತ್ಯಾಗದ ಮಾತು
''ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರು 21ರ ಬೆಳಗ್ಗೆ 10.30ಕ್ಕೆ ಆಗಮಿಸಬಹುದು. ನೇರವಾಗಿ ಸುವರ್ಣಸೌಧಕ್ಕೆ ಆಗಮಿಸುತ್ತಾರೆ'' ಎಂದು ಅವರು ಮಾಹಿತಿ ನೀಡಿದರು.
ಈ ವೇಳೆ ಶಾಸಕರಾದ ನೆಲಮಂಗಲ ಶ್ರೀನಿವಾಸ್, ಎ.ಸಿ. ಶ್ರೀನಿವಾಸ್, ಎಂಎಲ್ಸಿ ಎಸ್. ರವಿ, ಕೆಪಿಸಿಸಿ ವಕ್ತಾರ ಡಾ.ಶಂಕರ್ ಗುಹಾ, ಕಾಂಗ್ರೆಸ್ ಮುಖಂಡ ದುಂತೂರು ವಿಶ್ವನಾಥ್ ಜೊತೆಗಿದ್ದರು.
ಇದನ್ನೂ ಓದಿ: ನಾವು ಸುರ್ಜೇವಾಲ ವಿರುದ್ಧ ದೂರು ಕೊಟ್ಟಿಲ್ಲ, ಅವರೊಂದಿಗೆ ಒಳ್ಳೆ ಸಂಬಂಧ ಇದೆ: ಸಚಿವ ಸತೀಶ್ ಜಾರಕಿಹೊಳಿ