ಬಳ್ಳಾರಿ: ನಗರದ ಕೆಎಂಎಫ್‌ನ ಆಡಳಿತ ಕಚೇರಿ ಮುಂದೆ ಇಂದು ಬೆಳಗಿನ ಜಾವ ವಾಮಾಚಾರ ಮಾಡಲಾಗಿದೆ. ಕಚೇರಿ ಮುಂದೆ 8 ನಿಂಬೆ ಹಣ್ಣು ಹಾಗೂ ಕುಂಬಳಕಾಯಿಗೆ ಕುಂಕುಮ ಹಾಕಿ, ಮೊಳೆ ಹೊಡೆಯಲಾಗಿದೆ. ಸಣ್ಣ ಮಡಿಕೆಗೆ ದಾರ ಸುತ್ತಿ, ಟೆಂಗಿನಕಾಯಿಗೆ ತಾಯತದ ತಗಡು ಕಟ್ಟಿ, ಗೊಂಬೆಯೊಂದನ್ನು ಇಟ್ಟು ವಾಮಾಚಾರ ಮಾಡಲಾಗಿದೆ. ಭಾರೀ ಬಿಗಿ ಭದ್ರತೆ ನಡುವೆ ಈ ವಾಮಾಚಾರ ಹೇಗೆ ನಡೆಯಿತು, ಯಾರು ಮಾಡಿದ್ದು ಎಂಬುದೇ ಯಕ್ಷ ಪ್ರಶ್ನೆಯಾಗಿದೆ ಎನ್ನುತ್ತಾರೆ ಕೆಎಂಎಫ್‌ನ ಸಿಬ್ಬಂದಿ.
ಕೆಎಂಎಫ್‌ನ ನಷ್ಟದ ಹೊರೆ ಕಡಿಮೆ ಮಾಡಲು ಸಹಕಾರ ಸಚಿವರು ಅನವಶ್ಯಕ ವೆಚ್ಚ ಕಡಿತಗೊಳಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಅಲ್ಲದೇ ಕೆಎಂಎಫ್‌ಗೆ ಚುನಾಯಿತ ಆಡಳಿತ ಮಂಡಳಿ ಇಲ್ಲದೇ, ಹಿಂದಿನ ಆಡಳಿತ ಮಂಡಳಿಯನ್ನೇ ತಾತ್ಕಾಲಿಕವಾಗಿ ಮುಂದುವರೆಸಲಾಗಿದೆ. ಕೆಎಂಎಫ್‌ನ ಆಡಳಿತ ಮಂಡಳಿಯಲ್ಲಿ ಆಂತರಿಕ ಭಿನ್ನಾಭಿಪ್ರಾಯ ಇದ್ದವರು ಈ ಕಾರ್ಯ ಮಾಡಿರಬಹುದು ಎಂದು ಸ್ಥಳೀಯರೊಬ್ಬರು ಅನುಮಾನ ವ್ಯಕ್ತಪಡಿಸಿದ್ದಾರೆ.
''ವಾಮಾಚಾರದ ಅಳಿದುಳಿದ ವಸ್ತುಗಳನ್ನು ಸಿಬ್ಬಂದಿ ಸುಟ್ಟು ಹಾಕಿದ್ದಾರೆ. ಕಾಂಪೌಂಡ್ ಮೂಲಕ ಹೊರಗಡೆಯಿಂದ ಒಳಗಡೆ ಬರಲು ಅವಕಾಶ ಇದ್ದು, ಕಳೆದ ರಾತ್ರಿ ಕಾಂಪೌಂಡ್ ಮೂಲಕ ಬಂದು ಹೀಗೆ ಮಾಡಿರಬಹುದು. ಯಾರು ಅಂತ ಗೊತ್ತಿಲ್ಲ. ಇಲ್ಲಿರುವ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಸ್ವಲ್ಪ ಮಟ್ಟಿಗೆ ಮಾನಸಿಕವಾಗಿ ಕುಗ್ಗಿಸುವ ಕೆಲಸವಿದು. ಇದು ಹೊಸದು ಕೂಡ ಅಲ್ಲ. ಇದಕ್ಕೂ ಮುನ್ನ ಇಂತಹ ಘಟನೆಗಳು ನಡೆದಿವೆ. ಘಟನೆ ನಡೆದ ಭಾಗದಲ್ಲಿ ಸಿಸಿಟಿವಿ ಕ್ಯಾಮರಾ ಇಲ್ಲ. ಎಲ್ಲ ಕಡೆ ಸಿಸಿಟಿವಿ ಕ್ಯಾಮರಾ ಅಳವಡಿಸಿ ಜಾಗೃತರಾಗುವ ಕೆಲಸ ಮಾಡಲಾಗುತ್ತದೆ. ನಮ್ಮ ಸಿಬ್ಬಂದಿಗೆ ದೈರ್ಯದಿಂದ ಇರಲು ಹೇಳುವೆ. ಈ ಬಗ್ಗೆ ದೂರು ಕೂಡ ಕೊಡಲಾಗುವುದು. ಅನಿವಾರ್ಯ ಕಾರಣಗಳಿಂದ ಸಂಸ್ಥೆಯ ಕೆಲವರನ್ನು ಕೆಲಸದಿಂದ ತೆಗೆಯಬೇಕಾಗುತ್ತದೆ. ಇದರಿಂದ ಅಸಮಾಧಾನಗೊಂಡಿರುವ ಕೆಲವರು ಈ ರೀತಿ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದರೆ ಅದು ಮೂರ್ಖತನ. ಮತ್ತೆ ಹೀಗೆ ನಡೆಯದ ರೀತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ'' ಎಂದು ರಾಬಕೋವಿ (ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ) ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಪ್ರಭುಶಂಕರ್ ಮಾಹಿತಿ ನೀಡಿದರು.
ಇದನ್ನೂ ಓದಿ: ಹಾಸನ: ಕಳೆದ ಎರಡು ದಿನಗಳಲ್ಲಿ ಒಂದೇ ಶಾಲೆಗೆ ಎರಡು ಬಾರಿ ವಾಮಾಚಾರ! - BLACK MAGIC