ಮುಂಬೈ (ಮಹಾರಾಷ್ಟ್ರ):ಈಗಷ್ಟೇ ಮುಗಿದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಯು ಭರ್ಜರಿ ಗೆಲುವು ಸಾಧಿಸಿದೆ. ನೂತನ ಸರ್ಕಾರದ ಸಿಎಂ ಆಗಿ ದೇವೇಂದ್ರ ಫಡ್ನವೀಸ್ ಅವರು ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ.
ಶಿವಸೇನೆ ನಾಯಕ ಏಕನಾಥ್ ಶಿಂಧೆ, ಎನ್ಸಿಪಿಯ ಅಜಿತ್ ಪವಾರ್ ರೇಸ್ನಲ್ಲಿದ್ದಾರೆ. ಇತ್ತೀಚೆಗಿನ ಮಾಹಿತಿಯ ಪ್ರಕಾರ, ಅಜಿತ್ ಪವಾರ್ ಅವರು ದೇವೇಂದ್ರ ಫಡ್ನವೀಸ್ ಅವರಿಗೆ ಬೆಂಬಲ ನೀಡಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ ಶಿಂಧೆ ಮತ್ತು ಫಡ್ನವೀಸ್ ನಡುವೆ ಯಾರ ಪಾಲಿಗೆ ಪಟ್ಟ ಒಲಿಯಲಿದೆ ಎಂಬುದು ಪ್ರಶ್ನೆಯಾಗಿದೆ.
ಅಜಿತ್ ಪವಾರ್ ಹೇಳಿದ್ದೇನು?:ಈ ಬಗ್ಗೆ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮಾತನಾಡಿದ್ದು, ಮುಖ್ಯಮಂತ್ರಿ ಆಯ್ಕೆ ಬಗ್ಗೆ ಇನ್ನೂ ಯಾವುದೇ ಚರ್ಚೆ ನಡೆದಿಲ್ಲ. ಮಹಾಯುತಿ ಕೂಟದ ನಾಯಕನ ಘೋಷಿಸದೆ ಚುನಾವಣೆ ಎದುರಿಸಿ ಗೆದ್ದಿದ್ದೇವೆ. ಸಿಎಂ ಯಾರಾಗಬೇಕು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಮೂರೂ ಪಕ್ಷಗಳ ನಾಯಕರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದರು.
ಅಧಿಕಾರ ಹಂಚಿಕೆ ಸೂತ್ರ:ಇನ್ನೊಂದೆಡೆ, ಅಧಿಕಾರ ಹಂಚಿಕೆ ಸೂತ್ರದ ಬಗ್ಗೆಯೂ ಮಾತುಗಳು ಕೇಳಿ ಬರುತ್ತಿವೆ. 5 ವರ್ಷದಲ್ಲಿ ಎರಡು ಸಿಎಂ ಇರಲಿದ್ದಾರೆ. ಮೊದಲ ಅವಧಿಯ ಎರಡೂವರೆ ವರ್ಷದಲ್ಲಿ ಬಿಜೆಪಿಯ ದೇವೇಂದ್ರ ಫಡ್ನವೀಸ್, ಎರಡನೇ ಅವಧಿಯ ಎರಡೂವರೆ ವರ್ಷ ಏಕನಾಥ್ ಶಿಂಧೆ ಸಿಎಂ ಆಗಲಿದ್ದಾರೆ ಎಂದು ಹೇಳಲಾಗಿದೆ.