ಕರ್ನಾಟಕ

karnataka

ಶಾಲೆಗಳ ಹತ್ತಿರ ಕೆಫೀನ್​ ಎನರ್ಜಿ ಡ್ರಿಂಕ್ಸ್​ ಮಾರಾಟಕ್ಕೆ ನಿರ್ಬಂಧ: ಮಹಾರಾಷ್ಟ್ರ ಸರ್ಕಾರ ನಿರ್ಧಾರ - Caffeine Energy Drinks

By PTI

Published : Jul 12, 2024, 2:24 PM IST

ಶಾಲೆಗಳ ಸುತ್ತಮುತ್ತ ಅಧಿಕ ಕೆಫೀನ್​​ ಅಂಶದ ಪಾನೀಯಗಳ ಮಾರಾಟ ನಿಷೇಧಿಸಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (IANS)

ಮುಂಬೈ : ಶಾಲೆಗಳ ಸುತ್ತಮುತ್ತ ಅಧಿಕ ಕೆಫೀನ್ ಅಂಶವಿರುವ ಎನರ್ಜಿ ಡ್ರಿಂಕ್ಸ್​ ಮಾರಾಟಕ್ಕೆ ನಿರ್ಬಂಧ ವಿಧಿಸಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. ಶಾಲೆಗಳ 500 ಮೀಟರ್ ವ್ಯಾಪ್ತಿಯಲ್ಲಿ ಅಧಿಕ ಕೆಫೀನ್ ಅಂಶವಿರುವ ಎನರ್ಜಿ ಡ್ರಿಂಕ್ಸ್ ಮಾರಾಟವನ್ನು ನಿಷೇಧಿಸಿ ತಮ್ಮ ಇಲಾಖೆ ಆದೇಶ ಹೊರಡಿಸಲಿದೆ ಎಂದು ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (ಎಫ್​ ಡಿಎ) ಸಚಿವ ಧರ್ಮರಾವ್ ಬಾಬಾ ಅತ್ರಮ್ ಶುಕ್ರವಾರ ರಾಜ್ಯ ವಿಧಾನ ಪರಿಷತ್ತಿಗೆ ತಿಳಿಸಿದರು.

ರಾಜ್ಯ ವಿಧಾನಸಭೆಯ ಮೇಲ್ಮನೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಸ್ವತಂತ್ರ ಶಾಸಕ ಸತ್ಯಜೀತ್ ತಾಂಬೆ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಈ ಭರವಸೆ ನೀಡಿದರು. ಕೆಫೀನ್ ಸೇವನೆಯನ್ನು ನಿಯಂತ್ರಿಸುವ ಮೂಲಕ ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆಗಾಗಿ ಮಹಾರಾಷ್ಟ್ರ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.

"ರಾಜ್ಯದ ಶಾಲೆಗಳ 500 ಮೀಟರ್ ವ್ಯಾಪ್ತಿಯಲ್ಲಿ ಹೆಚ್ಚಿನ ಕೆಫೀನ್ ಅಂಶವಿರುವ ಎನರ್ಜಿ ಡ್ರಿಂಕ್ಸ್ ಮಾರಾಟವನ್ನು ನಿಷೇಧಿಸಿ ಎಫ್​ಡಿಎ ಶೀಘ್ರದಲ್ಲೇ ಆದೇಶ ಹೊರಡಿಸಲಿದೆ. ಪ್ರಸ್ತುತ ಇರುವ ನಿಯಮಗಳ ಪ್ರಕಾರ, ಒಂದು ಲೀಟರ್ ಕಾರ್ಬೊನೇಟೆಡ್ ಅಥವಾ ಕಾರ್ಬೊನೇಟೆಡ್ ಅಲ್ಲದ ಪಾನೀಯಗಳಲ್ಲಿ 145 ಎಂಎಲ್ ನಿಂದ 300 ಎಂಎಲ್ ವರೆಗಿನ ಕೆಫೀನ್ ಅಂಶವನ್ನು ಅನುಮತಿಸಲಾಗಿದೆ" ಎಂದು ಅತ್ರಮ್ ಹೇಳಿದರು.

ನಿಷೇಧಿಸಬೇಕಾದ ಪಾನೀಯಗಳ ಪಟ್ಟಿಯನ್ನು ಸಿದ್ಧಪಡಿಸಿ ಆದೇಶದ ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಾಜ್ಯಾದ್ಯಂತ ಎಫ್​ಡಿಎ ಅಧಿಕಾರಿಗಳಿಗೆ ಮಾರ್ಗಸೂಚಿಗಳನ್ನು ಹೊರಡಿಸುವಂತೆ ಕೌನ್ಸಿಲ್ ಉಪಾಧ್ಯಕ್ಷೆ ನೀಲಂ ಗೋರ್ಹೆ ಅವರು ಅತ್ರಮ್​ಗೆ ನಿರ್ದೇಶನ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಅತ್ರಮ್, ಶಿಕ್ಷಣ ಸಂಸ್ಥೆಗಳ ಸುತ್ತ ಕೆಫೀನ್ ಪಾನೀಯಗಳ ಮಾರಾಟ ನಿಷೇಧವನ್ನು ತ್ವರಿತವಾಗಿ ಜಾರಿಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಕೆಫೀನ್ ಇದೊಂದು ಉತ್ತೇಜಕ ಪರಿಣಾಮಗಳನ್ನು ಹೊಂದಿರುವ ನೈಸರ್ಗಿಕ ರಾಸಾಯನಿಕವಾಗಿದೆ. ಇದು ಕಾಫಿ, ಚಹಾ, ಕೋಲಾ, ಕೋಕೋ, ಗುರಾನಾ, ಯೆರ್ಬಾ ಮೇಟ್ ಮತ್ತು 60 ಕ್ಕೂ ಹೆಚ್ಚು ಇತರ ಉತ್ಪನ್ನಗಳಲ್ಲಿ ಕಂಡುಬರುತ್ತದೆ. ಕೇಂದ್ರ ನರಮಂಡಲ, ಹೃದಯ, ಸ್ನಾಯುಗಳು ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುವ ಕೇಂದ್ರಗಳನ್ನು ಉತ್ತೇಜಿಸುವ ಮೂಲಕ ಕೆಫೀನ್ ಕಾರ್ಯನಿರ್ವಹಿಸುತ್ತದೆ. ಮಾನಸಿಕ ಉತ್ತೇಜನ, ತಲೆನೋವು, ಮೈಗ್ರೇನ್, ಅಥ್ಲೆಟಿಕ್ ಕಾರ್ಯಕ್ಷಮತೆ, ಸ್ಮರಣೆ ಹೆಚ್ಚಳ ಮತ್ತು ಸ್ಥೂಲಕಾಯತೆಗೆ ಜನರು ಸಾಮಾನ್ಯವಾಗಿ ಕೆಫೀನ್ ಅನ್ನು ಬಳಸುತ್ತಾರೆ. ಇದನ್ನು ಅಸ್ತಮಾ, ಪಿತ್ತಕೋಶದ ಕಾಯಿಲೆ, ಎಡಿಎಚ್​ಡಿ, ಕಡಿಮೆ ರಕ್ತದೊತ್ತಡ, ಖಿನ್ನತೆ ಮತ್ತು ಇತರ ಅನೇಕ ಪರಿಸ್ಥಿತಿಗಳಲ್ಲಿ ಸಹ ಬಳಸಲಾಗುತ್ತದೆ,

ಇದನ್ನೂ ಓದಿ : 2060ರವರೆಗೂ ಅತ್ಯಧಿಕ ಜನಸಂಖ್ಯಾ ದೇಶವಾಗಿ ಭಾರತ: 2080ಕ್ಕೆ ವಿಶ್ವದ ಜನಸಂಖ್ಯೆ ಉತ್ತುಂಗಕ್ಕೆ! - Population Of India

ABOUT THE AUTHOR

...view details