ನವದೆಹಲಿ:ಭಾರೀ ಕುತೂಹಲ ಮೂಡಿಸಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ತೋರಣ ಕಟ್ಟಲಾಗಿದೆ. ರಾಜ್ಯದ ಎಲ್ಲ 288 ವಿಧಾನಸಭಾ ಸ್ಥಾನಗಳಿಗೆ ಇಂದು ಬೆಳಗ್ಗಿನಿಂದಲೇ ಮತದಾನ ನಡೆಯುತ್ತಿದೆ. ಇದರ ಜೊತೆಗೆ, ಜಾರ್ಖಂಡ್ ವಿಧಾನಸಭೆಯ 38 ಸ್ಥಾನಗಳಿಗೆ ಎರಡನೇ ಹಂತದ ಮತದಾನ ಪ್ರಗತಿಯಲ್ಲಿದೆ. ಸಂಜೆ 6 ಗಂಟೆಗೆ ಮುಕ್ತಾಯವಾಗಲಿದೆ. ಇನ್ನೇನು ಕೆಲ ಗಂಟೆಗಳಲ್ಲಿ ಮತದಾನ ಅಂತ್ಯವಾಗಲಿದ್ದು, ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಅಡಕವಾಗಲಿದೆ.
ಮತದಾನಕ್ಕೆ ಎಲ್ಲವೂ ಸಿದ್ಧ:ಮಹಾರಾಷ್ಟ್ರ ವಿಧಾನಸಭೆಗೆ ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದೆ. 288 ಸ್ಥಾನಗಳಿಗೆ ಒಟ್ಟು 4,136 ಮಂದಿ ಸ್ಪರ್ಧಿಸುತ್ತಿದ್ದಾರೆ. ಇವರಲ್ಲಿ 2,086 ಸ್ವತಂತ್ರ ಅಭ್ಯರ್ಥಿಗಳು. 9,63,69,410 ನೋಂದಾಯಿತ ಮತದಾರರಿದ್ದಾರೆ. ಕೇಂದ್ರ ಚುನಾವಣಾ ಆಯೋಗ 1,00,186 ಮತಗಟ್ಟೆಗಳನ್ನು ಸ್ಥಾಪಿಸಿದೆ. ಚುನಾವಣಾ ಆಯೋಗದ ಪ್ರಕಾರ ಸುಮಾರು 6 ಲಕ್ಷ ಸರ್ಕಾರಿ ನೌಕರರು ಚುನಾವಣಾ ಕರ್ತವ್ಯದಲ್ಲಿ ಭಾಗವಹಿಸುತ್ತಿದ್ದಾರೆ. ನವೆಂಬರ್ 23 ರಂದು ಮತ ಎಣಿಕೆ ನಡೆಯಲಿದೆ.
'ಮಹಾ' ಮೈತ್ರಿಗಳ ಯುದ್ಧ:ಮಹಾರಾಷ್ಟ್ರದಲ್ಲಿ ಬಿಜೆಪಿ, ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ 'ಮಹಾಯುತಿ' ಮೈತ್ರಿಯು ಕಣಕ್ಕಿಳಿದಿದೆ. ಇದಕ್ಕೆ ಪೈಪೋಟಿ ನೀಡಲು ಕಾಂಗ್ರೆಸ್, ಶಿವಸೇನೆ (ಯುಬಿಟಿ) ಮತ್ತು ಎನ್‌ಸಿಪಿ (ಶರದ್ ಪವಾರ್)ಯ 'ಮಹಾವಿಕಾಸ್ ಅಘಾಡಿ'ಯು ಸಜ್ಜಾಗಿದೆ.