ಮುಂಬೈ:ಸರ್ಕಾರಿಗೌರವಗಳೊಂದಿಗೆ ಉದ್ಯಮಿ ರತನ್ ಟಾಟಾ ಅವರ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬುಧವಾರ ಹೇಳಿದ್ದಾರೆ. ಅನಾರೋಗ್ಯದ ಹಿನ್ನೆಲೆ 86 ವರ್ಷದ ರತನ್ ಟಾಟಾ ಅವರು ಮುಂಬೈ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಆಸ್ಪತ್ರೆಯಲ್ಲಿ ರಾತ್ರಿ ನಿಧನರಾಗಿದ್ದಾರೆ.
"ನೈತಿಕತೆ ಮತ್ತು ಉದ್ಯಮಶೀಲತೆಯ ವಿಶಿಷ್ಟ ಮಿಶ್ರಣ ರತನ್ ಟಾಟಾ. 150 ವರ್ಷಗಳಷ್ಟು ಹಳೆಯ ಟಾಟಾ ಸಮೂಹವನ್ನು ಯಶಸ್ವಿಯಾಗಿ ಮುನ್ನಡಿಸಿದ ಜೀವಂತ ದಂತಕಥೆಯಾಗಿದ್ದರು. ರತನ್ ಟಾಟಾ ಜಿ ಅವರ ಪಾರ್ಥಿವ ಶರೀರಕ್ಕೆ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆಯನ್ನು ನೀಡಲಾಗುವುದು" ಎಂದು ಎಕ್ಸ್ ಪೋಸ್ಟ್ನಲ್ಲಿ, ಸಿಎಂ ಶಿಂಧೆ ತಿಳಿಸಿದ್ದಾರೆ.
ರತನ್ ಟಾಟಾ ಅವರ ಪಾರ್ಥೀವ ಶರೀರವನ್ನು ಗುರುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 4ಯ ವರೆಗೆ ದಕ್ಷಿಣ ಮುಂಬೈನ ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ (ಎನ್ಸಿಪಿಎ) ಯಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು ಎಂದು ಅವರ ಸಂಬಂಧಿಕರು ತಿಳಿಸಿದ್ದಾರೆ. ರತನ್ ಅವರು ದೇಶದ ಹೆಮ್ಮೆ. ಮುಂದಿನ ಪೀಳಿಗೆಯ ಉದ್ಯಮಿಗಳಿಗೆ ಸದಾ ಸ್ಪೂರ್ತಿಯಾಗಿದ್ದಾರೆ. 26/11(ಮುಂಬೈ ತಾಜ್ ಹೋಟೆಲ್ ದಾಳಿ) ಭಯೋತ್ಪಾದನಾ ದಾಳಿಯ ಸಂದರ್ಭದಲ್ಲಿ ಅವರು ಪ್ರದರ್ಶಿಸಿದ ದೃಢತೆ ಯಾವಾಗಲೂ ನೆನಪಿನಲ್ಲಿ ಉಳಿಯುತ್ತದೆ" ಎಂದು ಮುಖ್ಯಮಂತ್ರಿ ಮಾಧ್ಯಮಕ್ಕೆ ತಿಳಿಸಿದ್ದಾರೆ.