ದೆಹಲಿ: ದೇಶದಾದ್ಯಂತ ಮಹಾ ಶಿವರಾತ್ರಿ ಸಂಭ್ರಮ ಮನೆ ಮಾಡಿದೆ. ಶಿವ ದೇಗುಲಗಳಿಗೆ ಹೆಚ್ಚಿನ ಸಂಖ್ಯೆಯ ಭಕ್ತರು ಭೇಟಿ ಕೊಡುತ್ತಿದ್ದಾರೆ. ಎಲ್ಲೆಡೆ ಶಿವ ನಾಮ ಸ್ಮರಣೆ ನಡೆಯುತ್ತಿದೆ. ಆಂಧ್ರಪ್ರದೇಶದ ಶ್ರೀಕಾಳಹಸ್ತಿ, ತಿರುಪತಿ, ವಿಜಯವಾಡದ ರಾಮಲಿಂಗೇಶ್ವರ ಸ್ವಾಮಿ ದೇವಾಲಯ ಸೇರಿದಂತೆ ದೇಶದ ನಾನಾ ಕಡೆಗಳಲ್ಲಿ ಶಿವಘೋಷ ಮೊಳಗುತ್ತಿದೆ.
ಉತ್ತರ ಪ್ರದೇಶದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಭಕ್ತರು ದೇಗುಲಗಳಿಗೆ ತೆರಳಿ ಪ್ರಾರ್ಥನೆ, ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ವಾರಾಣಸಿಯ ಕಾಶಿ ವಿಶ್ವನಾಥ ದೇವಾಲಯದಲ್ಲಿ ಬೆಳಗ್ಗೆ ಶಿವನಿಗೆ ಆರತಿ ಬೆಳಗಲಾಯಿತು. ಕಾಶಿ ವಿಶ್ವನಾಥ ದೇವಸ್ಥಾನ ಟ್ರಸ್ಟ್ ಇಂದಿನ ಮಂಗಳಾರತಿಯಿಂದ ಮಾರ್ಚ್ 9ರ ಭೋಗ್ ಆರತಿಯ ಸಮಯದವರೆಗೆ ಒಟ್ಟು 36 ಗಂಟೆಗಳ ಪೂಜಾ ವಿಧಿ ವಿಧಾನಗಳನ್ನು ನಿರಂತರವಾಗಿ ನೇರಪ್ರಸಾರ ಮಾಡುತ್ತಿದೆ. ಅಯೋಧ್ಯೆಯ ನಾಗೇಶ್ವರನಾಥ ದೇವಾಲಯಕ್ಕೆ ಅಪಾರ ಭಕ್ತರು ಆಗಮಿಸಿದ್ದಾರೆ. ಇಲ್ಲಿನ ಸಂಗಮದಲ್ಲಿ ಭಕ್ತರು ಪವಿತ್ರ ಸ್ನಾನ ಮಾಡಿ ಶಿವ ನಾಮ ಸ್ಮರಣೆ ಮಾಡುತ್ತಿದ್ದಾರೆ.
ದೆಹಲಿಯ ಗೌರಿ ಶಂಕರ ದೇವಾಲಯ, ಮಹಿಪಾಲ್‌ಪುರದಲ್ಲಿರುವ ಶಿವಮೂರ್ತಿ, ಉತ್ತರಾಖಂಡದ ಹರಿದ್ವಾರದ ದಕ್ಷೇಶ್ವರ ಮಹಾದೇವ ದೇವಾಲಯ, ಪಂಜಾಬ್ನ ಶಿವಲಾ ಬಾಗ್ ಭೈಯಾನ್ ದೇವಸ್ಥಾನ, ಮಹಾರಾಷ್ಟ್ರದ ನಾಸಿಕ್‌ನ ತ್ರಯಂಬಕೇಶ್ವರ ದೇವಸ್ಥಾನ, ಮಧ್ಯಪ್ರದೇಶದ ಉಜ್ಜಯಿನಿಯ ಶ್ರೀ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಬೆಳಗಿನ ಆರತಿ ನಡೆಯಿತು. ಇದಲ್ಲದೇ ರಾಷ್ಟ್ರಾದ್ಯಂತ ಭಗವಾನ್ ಶಿವನಿಗಾಗಿ ಭಕ್ತರು ಉಪವಾಸದ ಮೂಲಕ ಶಿವಾರಾಧನೆ ಮಾಡುತ್ತಿದ್ದಾರೆ. ಶಿವ ದೇಗುಲಗಳು ಆಕರ್ಷಕ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ.