ಮೈಸೂರು : ಮುಖ್ಯಮಂತ್ರಿ ಹಾಗೂ ಅವರ ಕುಟುಂಬದ ವಿರುದ್ದ ಸುಳ್ಳು ಸುದ್ದಿಗಳನ್ನ ಹಾಗೂ ಸುಳ್ಳು ದಾಖಲೆಗಳನ್ನ ಜಾಲತಾಣಗಳ ಮೂಲಕ ಬಿಡುಗಡೆ ಮಾಡುತ್ತಿರುವ ಸ್ನೇಹಮಯಿ ಕೃಷ್ಣ ಒಬ್ಬ ರೌಡಿ ಶೀಟರ್, ಆತನನ್ನು ಕೂಡಲೇ ಬಂಧಿಸಿ ಗಡಿಪಾರು ಮಾಡಬೇಕೆಂದು ಮೈಸೂರು ಜಿಲ್ಲಾ ಕಾಂಗ್ರೆಸ್ ಘಟಕ ನಗರದ ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ಸಲ್ಲಿಸಿದೆ. ಇದು ಸ್ನೇಹಮಯಿ ಕೃಷ್ಣ ವಿರುದ್ದದ 2ನೇ ದೂರಾಗಿದೆ.
ಈ ಬಗ್ಗೆ ಕೆಪಿಸಿಸಿ ಮಾಧ್ಯಮ ವಕ್ತಾರ ಎಂ. ಲಕ್ಷ್ಮಣ್ ಅವರು ಮಾತನಾಡಿ, ಸ್ನೇಹಮಯಿ ಕೃಷ್ಣ ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ದಾಖಲೆಗಳನ್ನ ಬಿಡುಗಡೆ ಮಾಡುತ್ತಿದ್ದು, ಇದರಿಂದ ಸಾರ್ವಜನಿಕ ವಲಯದಲ್ಲಿ ಸಿಎಂ ಹಾಗೂ ಸಿಎಂ ಕುಟುಂಬದ ವಿರುದ್ದ ಕೆಟ್ಟ ಅಭಿಪ್ರಾಯ ಮೂಡುತ್ತಿದೆ. ಕೂಡಲೇ ಸ್ನೇಹಮಯಿ ಕೃಷ್ಣ ಅವರನ್ನ ಬಂಧಿಸಬೇಕು. ಗಡಿಪಾರು ಮಾಡಬೇಕು, ಇಲ್ಲದಿದ್ದರೆ ನಾಳೆಯಿಂದ ಪೊಲೀಸ್ ಠಾಣೆ ಮುಂದೆ ಸತ್ಯಾಗ್ರಹ ಮಾಡುತ್ತೇವೆ ಎಂದು ಹೇಳಿದರು.
ಲೋಕಾಯುಕ್ತಕ್ಕೆ ಮನವಿ ಪತ್ರ ಸಲ್ಲಿಸಿದ ಸ್ನೇಹಮಯಿ ಕೃಷ್ಣ : ಮುಡಾದಿಂದ 50:50 ಅನುಪಾತದಲ್ಲಿ ಸಿದ್ದರಾಮಯ್ಯ ಪತ್ನಿ ಹೆಸರಿನಲ್ಲಿ 14 ಬದಲಿ ನಿವೇಶನ ಪಡೆಯಲು ಸಿದ್ದರಾಮಯ್ಯ ಅವರ ಪಾತ್ರ ಏನೂ ಇಲ್ಲ ಎಂಬ ಮಾತುಗಳು ಕೇಳಿ ಬಂದ ಹಿನ್ನೆಲೆ, ಇಂದು ದೂರುದಾರ ಸ್ನೇಹಮಯಿ ಕೃಷ್ಣ ಮೈಸೂರು ಲೋಕಾಯುಕ್ತಕ್ಕೆ ಮತ್ತೊಂದು ಮನವಿ ಪತ್ರ ಸಲ್ಲಿಸಿದ್ದಾರೆ. ಈ ಪತ್ರದಲ್ಲಿ ಸಿಎಂ ಪ್ರಭಾವದ ಬಗ್ಗೆ ಮಾಹಿತಿ ಇದೆ ಎಂಬುದು ತಿಳಿದು ಬಂದಿದೆ.
ಸೂಕ್ಷ್ಮವಾಗಿ ವಿಶ್ಲೇಷಿಸಬೇಕೆಂದು ಮನವಿ ಮಾಡಿದ್ದೇನೆ : ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಡಾ ಬದಲಿ ನಿವೇಶನ ಪಡೆದ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಇಲ್ಲ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಈ ಹಿನ್ನೆಲೆ ಆ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ ಸಾಕ್ಷ್ಯಗಳನ್ನು ಲೋಕಾಯುಕ್ತ ತನಿಖಾಧಿಕಾರಿಗಳಿಗೆ ಕೊಟ್ಟು ಬಂದಿದ್ದು, ಅವುಗಳನ್ನ ಸೂಕ್ಷ್ಮವಾಗಿ ವಿಶ್ಲೇಷಿಸಬೇಕೆಂದು ಮನವಿ ಮಾಡಿದ್ದೇನೆ ಎಂದು ಹೇಳಿದರು.
ಮುಡಾ ವಿಚಾರದಲ್ಲಿ ಅಧಿಕಾರಿಗಳಿಂದ ಲೋಪವಾಗಿದೆ ಎನ್ನುತ್ತಾರೆ. ಆದರೆ ಜನ ಸಾಮಾನ್ಯರ ವಿಚಾರದಲ್ಲಿ ಲೋಪ ಮಾಡದ ಅಧಿಕಾರಿಗಳು, ಸಿಎಂ ವಿಚಾರದಲ್ಲಿ ಲೋಪ ಆಗಿರುವುದನ್ನ ನೋಡಿದರೆ, ಅಧಿಕಾರಿಗಳ ಮೇಲೆ ಪ್ರಭಾವ ಬೀರಿದ್ದಾರೆ ಎಂಬುದು ಗೊತ್ತಾಗುತ್ತದೆ ಎಂದರು.
ಕಾನೂನು ಹೋರಾಟ ಮುಂದುವರೆಸುತ್ತೇನೆ : ಲೋಕಾಯುಕ್ತ ಅಧಿಕಾರಿಗಳು ವರದಿಯಲ್ಲಿ ಏನೇ ವರದಿ ನೀಡಲಿ, ಅಂತಿಮವಾಗಿ ನನ್ನಲ್ಲಿರುವ ಸಾಕ್ಷಿಗಳನ್ನ ನ್ಯಾಯಾಲಯಕ್ಕೆ ಕೊಟ್ಟು, ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಮನವಿ ಮಾಡುತ್ತೇನೆ. ಕಾನೂನು ಹೋರಾಟ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಕೆಲಸ ಮಾಡುತ್ತೇನೆ. ಮುಡಾ ಆಸ್ತಿಯನ್ನು ಮುಡಾಗೆ ವಾಪಸ್ ಕೊಡಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ನನ್ನ ವಿರುದ್ದ 24 ಕೇಸ್ಗಳು ಮಾತ್ರ ಇವೆ : ಪ್ರತಿನಿತ್ಯ ನನ್ನ ವಿರುದ್ದ ಕೆಪಿಸಿಸಿ ಮಾಧ್ಯಮ ವಕ್ತಾರ ಎಂ. ಲಕ್ಷ್ಮಣ್ ಮೈಸೂರಿನ ವಿವಿಧ ಠಾಣೆಗಳಲ್ಲಿ ದೂರು ದಾಖಲಿಸುತ್ತಿದ್ದಾರೆ. ನನ್ನ ವಿರುದ್ದ 44 ಕೇಸ್ಗಳು ಇವೆ ಎಂದು ಹೇಳಿದ್ದಾರೆ. ಆದರೆ, ನನ್ನ ವಿರುದ್ದ 24 ಕೇಸ್ಗಳು ಮಾತ್ರ ಇವೆ. ಇನ್ನೂ 20 ಕೇಸ್ಗಳನ್ನ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ಸುಳ್ಳು ಕೇಸ್ಗಳಿಗೆ, ಆರೋಪಗಳಿಗೆ ಹೆದರುವವನು ನಾನಲ್ಲ. ಇದರಿಂದಾಗಿ ನನ್ನ ಹೋರಾಟ ನಿಲ್ಲಿಸಲು ಆಗುವುದಿಲ್ಲ, ನನ್ನ ಮೇಲೆ ಕೇಸ್ ಹಾಕಲು ಹಲವು ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂದರು.
ಇದನ್ನೂ ಓದಿ : ಮೈಸೂರು: ಮುಡಾ ಹಗರಣದ ದೂರುದಾರ ಸ್ನೇಹಮಯಿ ಕೃಷ್ಣ ವಿರುದ್ಧ ಎಫ್‌ಐಆರ್