ಕರ್ನಾಟಕ

karnataka

ETV Bharat / bharat

ಮಹಾ ಕುಂಭಮೇಳ: ಜಾಲತಾಣಗಳಲ್ಲಿ ಮಹಿಳೆಯರ ಆಕ್ಷೇಪಾರ್ಹ ವೀಡಿಯೊ, 2 ಪ್ರಕರಣ ದಾಖಲು - MAHAKUMBH 2025

ಮಹಾ ಕುಂಭಮೇಳದಲ್ಲಿ ಸ್ನಾನ ಮಾಡುತ್ತಿರುವ ಮಹಿಳೆಯರ ಆಕ್ಷೇಪಾರ್ಹ ವೀಡಿಯೊಗಳನ್ನು ಪೋಸ್ಟ್​ ಮಾಡುತ್ತಿರುವವರ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ಕುಂಭಮೇಳದ ದೃಶ್ಯ
ಮಹಾ ಕುಂಭಮೇಳದ ದೃಶ್ಯ (IANS)

By ETV Bharat Karnataka Team

Published : Feb 20, 2025, 6:13 PM IST

ಪ್ರಯಾಗರಾಜ್(ಉತ್ತರ ಪ್ರದೇಶ):ಮಹಾ ಕುಂಭಮೇಳದಲ್ಲಿ ಮಹಿಳಾ ಯಾತ್ರಾರ್ಥಿಗಳು ಸ್ನಾನ ಮಾಡುತ್ತಿರುವ ಆಕ್ಷೇಪಾರ್ಹ ವೀಡಿಯೊಗಳನ್ನು ಪೋಸ್ಟ್ ಮಾಡಿದ ಮತ್ತು ಮಾರಾಟ ಮಾಡಿದ ಆರೋಪದ ಮೇಲೆ ಎರಡು ಸಾಮಾಜಿಕ ಮಾಧ್ಯಮ ಖಾತೆಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ಬುಧವಾರ ತಿಳಿಸಿದ್ದಾರೆ.

ಮಹಾ ಕುಂಭಮೇಳಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ದಾರಿತಪ್ಪಿಸುವ ಮತ್ತು ಆಕ್ಷೇಪಾರ್ಹ ಕಂಟೆಂಟ್​ ಪೋಸ್ಟ್​ ಮಾಡುವುದನ್ನು ತಡೆಗಟ್ಟುವ ಪ್ರಯತ್ನಗಳ ಭಾಗವಾಗಿ ಉತ್ತರ ಪ್ರದೇಶ ಪೊಲೀಸ್ ಮುಖ್ಯಸ್ಥ ಪ್ರಶಾಂತ್ ಕುಮಾರ್ ಅವರ ನಿರ್ದೇಶನದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.

ಕೆಲವೊಂದು ಸಾಮಾಜಿಕ ಮಾಧ್ಯಮ ಜಾಲತಾಣಗಳಲ್ಲಿ ಜನತೆಯ ಗೌಪ್ಯತೆ ಮತ್ತು ಘನತೆಯನ್ನು ಸ್ಪಷ್ಟವಾಗಿ ಉಲ್ಲಂಘಿಸಿ, ಕುಂಭಮೇಳದಲ್ಲಿ ಮಹಿಳೆಯರು ಸ್ನಾನ ಮಾಡುವ ಮತ್ತು ಬಟ್ಟೆ ಬದಲಾಯಿಸುವ ವೀಡಿಯೊಗಳನ್ನು ಅಪ್‌ಲೋಡ್ ಮಾಡುತ್ತಿರುವುದನ್ನು ಸಾಮಾಜಿಕ ಮಾಧ್ಯಮ ಮೇಲ್ವಿಚಾರಣಾ ತಂಡ ಪತ್ತೆ ಮಾಡಿದೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಹಿಳಾ ಯಾತ್ರಾರ್ಥಿಗಳ ಆಕ್ಷೇಪಾರ್ಹ ವೀಡಿಯೊಗಳನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ ಫೆಬ್ರವರಿ 17ರಂದು ಇನ್‌ಸ್ಟಾಗ್ರಾಮ್ ಖಾತೆಯೊಂದರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಖಾತೆ ಯಾರಿಗೆ ಸೇರಿದೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ಇನ್ ಸ್ಟಾಗ್ರಾಮ್​ನ ಒಡೆತನ ಹೊಂದಿರುವ ತಂತ್ರಜ್ಞಾನ ಸಂಸ್ಥೆ ಮೆಟಾಗೆ ಕೋರಲಾಗಿದೆ ಮತ್ತು ವಿವರಗಳು ಬಂದ ನಂತರ ಬಂಧನ ಸೇರಿದಂತೆ ಇತರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಫೆಬ್ರವರಿ 19ರಂದು ದಾಖಲಾದ ಎರಡನೇ ಪ್ರಕರಣದಲ್ಲಿ, ಟೆಲಿಗ್ರಾಮ್ ಚಾನೆಲ್ ಒಂದರಲ್ಲಿ ಇದೇ ರೀತಿಯ ವೀಡಿಯೊಗಳನ್ನು ಮಾರಾಟಕ್ಕೆ ಇಟ್ಟಿರುವುದು ಕಂಡುಬಂದಿದೆ. ಚಾನೆಲ್ ವಿರುದ್ಧ ಕಾನೂನು ಕ್ರಮಗಳನ್ನು ಪ್ರಾರಂಭಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಮಹಾ ಕುಂಭಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ವಿಷಯ ಅಥವಾ ತಪ್ಪು ಮಾಹಿತಿಯನ್ನು ಹರಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಯುಪಿಯಲ್ಲಿ ದುಷ್ಕರ್ಮಿಗಳಿಗೆ ದುಸ್ವಪ್ನವಾಗಿ ಕಾಡುವ ಯೋಗಿ ಸರ್ಕಾರ; 2017ರಿಂದ 220 ಮಂದಿ ಎನ್​ಕೌಂಟರ್ - UP ENCOUNTERS

ABOUT THE AUTHOR

...view details