ಮಹಾಕುಂಭ ನಗರ (ಉತ್ತರಪ್ರದೇಶ ):ಪ್ರಯಾಗರಾಜ್ ನ ತ್ರಿವೇಣಿ ಸಂಗಮದ ಮಹಾಕುಂಭ ನಗರದಲ್ಲಿ 620 ದಶಲಕ್ಷ ಎಂದರೆ 62 ಕೋಟಿಗೂ ಹೆಚ್ಚು ಯಾತ್ರಾರ್ಥಿಗಳು ಮತ್ತು ಲಕ್ಷಾಂತರ ವಾಹನಗಳ ಸಂಚಾರದ ಹೊರತಾಗಿಯೂ, ಗಾಳಿಯ ಗುಣಮಟ್ಟವು ಹದಗೆಟ್ಟಿಲ್ಲ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಬಿಡುಗಡೆ ಮಾಡಿದ ಅಂಕಿ- ಅಂಶಗಳು ತೋರಿಸುತ್ತಿವೆ ಎಂದು ಉತ್ತರ ಪ್ರದೇಶ ಸರ್ಕಾರ ಸೋಮವಾರ ನೀಡಿದ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ದೇಶದ ಜನಸಂಖ್ಯೆಯ ಶೇಕಡಾ 60 ಕ್ಕಿಂತ ಹೆಚ್ಚು ಜನರು ಮಹಾ ಕುಂಭ ನಡೆಯುತ್ತಿರುವ ತ್ರಿವೇಣಿ ಸಂಗಮಕ್ಕೆ ಭೇಟಿ ನೀಡಿ ಮಿಂದೆದ್ದಿದ್ದಾರೆ. ಇದೇ ವೇಳೆ ಲಕ್ಷಾಂತರ ವಾಹನಗಳು ಪ್ರಯಾಗರಾಜ್ ಗೆ ಬಂದಿವೆ. ಆದಾಗ್ಯೂ ಕುಂಭ ಪ್ರದೇಶದ ಗಾಳಿಯ ಗುಣಮಟ್ಟದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಉಸಿರಾಡಲು ಶುದ್ಧವಾಗಿಯೇ ಇರುವುದು CPCB ಯ ವರದಿಗಳಿಂದ ಗೊತ್ತಾಗಿದೆ. ಪ್ರಯಾಗರಾಜ್ ನ ಮಹಾಕುಂಭ ನಗರದ ಗಾಳಿಯ ಗುಣಮಟ್ಟ ಹಿತಕರವಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ದೃಢಪಡಿಸಿದೆ. ಮಹಾಕುಂಭದಾದ್ಯಂತ ಗಾಳಿಯ ಗುಣಮಟ್ಟ ಹಸಿರು ವಲಯದಲ್ಲಿ ಉಳಿದಿದೆ ಎಂದು CPCB ಯ ಪರಿಸರ ಸಲಹೆಗಾರ ಎಂಜಿನಿಯರ್ ಶೇಖ್ ಶಿರಾಜ್ ಹೇಳಿದ್ದಾರೆ.
ಮಹತ್ವದ ದಿನಾಂಕಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) ಹೀಗಿತ್ತು: ಜನವರಿ 13 ರಂದು 67 AQI (ಪೌಷ್ ಪೂರ್ಣಿಮೆ), ಜನವರಿ 14 (ಮಕರ ಸಂಕ್ರಾಂತಿ)67AQI, ಜನವರಿ 29 (ಮೌನಿ ಅಮಾವಾಸ್ಯೆ) 106 AQI, ಫೆಬ್ರವರಿ 3 (ಬಸಂತ್ ಪಂಚಮಿ) 65 AQI ಮತ್ತು ಫೆಬ್ರವರಿ 12 ರಂದು (ಮಘಿ ಪೌರ್ಣಿಮೆ ದಿನ) 52AQI ದಾಖಲಾಗಿತ್ತು ಎಂದು CPCB ಅಂಕಿ - ಅಂಶಗಳು ಹೇಳುತ್ತಿವೆ.
"100" ಕ್ಕಿಂತ ಕೆಳಗಿನ AQI ಅನ್ನು ಉತ್ತಮವೆಂದು ಪರಿಗಣಿಸಲಾಗುತ್ತದೆ. ಆದರೆ "100 ರಿಂದ 150" ಅನ್ನು ಮಧ್ಯಮ ಎಂದು ವರ್ಗೀಕರಿಸಲಾಗಿದೆ. ಮೌನಿ ಅಮಾವಾಸ್ಯೆ ಹೊರತುಪಡಿಸಿ (AQI ಸ್ವಲ್ಪಮಟ್ಟಿಗೆ ಮಧ್ಯಮವಾಗಿದೆ ), ಉಳಿದ ಎಲ್ಲಾ ದಿನಗಳಲ್ಲಿ ಗಾಳಿಯ ಗುಣಮಟ್ಟವನ್ನು ಉತ್ತಮವೆಂದು ವರ್ಗೀಕರಿಸಲಾಗಿದೆ. ಒಟ್ಟಾರೆಯಾಗಿ, ಮಹಾಕುಂಭ ಪ್ರದೇಶವು 42 ದಿನಗಳ ಕಾಲ ಹಸಿರು ವಲಯದಲ್ಲೇ ಉಳಿದುಕೊಂಡಿದ್ದು, ಭಕ್ತ ಸಾಗರ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ ಎಂದು ಹೇಳಿಕೆ ತಿಳಿಸಿದೆ.
42 ದಿನಗಳ ಕಾಲವೂ ಹಸಿರು ಒಲಯದಲ್ಲಿ ಗಾಳಿಯ ಗುಣಮಟ್ಟ:ಭಕ್ತರ ನಿರಂತರ ಒಳಹರಿವು ಮತ್ತು ಭಾರಿ ಸಂಖ್ಯೆಯಲ್ಲಿ ವಾಹನಗಳ ಉಪಸ್ಥಿತಿಯ ಹೊರತಾಗಿಯೂ ನಗರದ ಗಾಳಿಯ ಗುಣಮಟ್ಟವು ಸತತ 42 ದಿನಗಳವರೆಗೆ ಹಸಿರು ವಲಯದಲ್ಲಿ ಗುರುತಿಸಿಕೊಂಡಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ. CPCB ಯ ಅಧಿಕೃತ ಅಪ್ಲಿಕೇಶನ್ 'ಸಮೀರ್' ನಲ್ಲಿ ಜನವರಿ ಮತ್ತು ಫೆಬ್ರವರಿಯಿಂದ ಗಾಳಿಯ ಗುಣಮಟ್ಟದ ಡೇಟಾದ ತುಲನಾತ್ಮಕ ವಿಶ್ಲೇಷಣೆಯು ಮಹಾಕುಂಭದ ಗಾಳಿಯ ಗುಣಮಟ್ಟವು ಚಂಡೀಗಢಕ್ಕಿಂತ ಉತ್ತಮವಾಗಿದೆ ಎಂದು ತೋರಿಸುತ್ತಿದೆ.
ಮಹಾ ಕುಂಭದ ನಿಮಿತ್ತ ಪ್ರಯಾಗರಾಜ್ ಮುನ್ಸಿಪಲ್ ಕಾರ್ಪೊರೇಶನ್ ಪರಿಣಾಮಕಾರಿ ವಾಯು ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಕೈಗೊಂಡಿದ್ದು, ನಿಯಮಿತ ಮೇಲ್ವಿಚಾರಣೆ ಮತ್ತು ಬಹು ಉಪಕ್ರಮಗಳನ್ನು ಕೈಗೊಂಡ ಪರಿಣಾಮ ಈ ಫಲಿತಾಂಶ ಬಂದಿದೆ ಎಂದು ಮಂಡಳಿ ತಿಳಿಸಿದೆ.