ಮುಂಬೈ, ಮಹಾರಾಷ್ಟ್ರ: ಇಂದು ಮಹಾರಾಷ್ಟ್ರ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಮಹಾ ನಾಯಕನ ಆಯ್ಕೆಗಾಗಿ ಈಗಾಗಲೇ ಇಬ್ಬರು ಕೇಂದ್ರ ವೀಕ್ಷಕರು ಮುಂಬೈಗೆ ಧಾವಿಸಿ ಬಂದಿದ್ದಾರೆ. ಈ ಬಗ್ಗೆ ಮಾತನಾಡಿದ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ, ಪಕ್ಷದ ಹೊಸದಾಗಿ ಆಯ್ಕೆಯಾದ ಶಾಸಕರೊಂದಿಗೆ ಮಾತುಕತೆ ನಡೆಸಲಾಗುವುದು, ಬಳಿಕ ಶಾಸಕಾಂಗ ಪಕ್ಷದ ನಾಯಕನ ಹೆಸರನ್ನು ಸಭೆಯಲ್ಲಿ ಪ್ರಸ್ತಾಪಿಸಿ ಬುಧವಾರ ಅನುಮೋದನೆ ಪಡೆಯಲಾಗುವುದು ಎಂದು ಹೇಳಿದ್ದಾರೆ.
ಬುಧವಾರ ನಡೆಯಲಿರುವ ಈ ಮಹತ್ವದ ಸಭೆ ಹಿನ್ನೆಲೆಯಲ್ಲಿ ಮಂಗಳವಾರ ತಡರಾತ್ರಿ ಮುಂಬೈಗೆ ಆಗಮಿಸಿದ ರೂಪಾನಿ, ಒಮ್ಮತ ಮೂಡಿದರೆ ಒಬ್ಬರ ಹೆಸರನ್ನು ಮಾತ್ರ ಆಯ್ಕೆ ಮಾಡಲಾಗುವುದು ಎಂದೂ ತಿಳಿಸಿದ್ದಾರೆ. ನವೆಂಬರ್ 20 ರಂದು ನಡೆದ ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ ಗಮನಾರ್ಹ ಯಶಸ್ಸು ಸಾಧಿಸಿದೆ. ಮಹಾರಾಷ್ಟ್ರ ವಿಧಾನಸಭೆಯ ಒಟ್ಟು 288 ಸ್ಥಾನಗಳಲ್ಲಿ 132 ಸ್ಥಾನಗಳಲ್ಲಿ ವಿಜಯ ಸಾಧಿಸುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇದು ರಾಜ್ಯದಲ್ಲಿ ಬಿಜೆಪಿಯ ಅತ್ಯುತ್ತಮ ಸಾಧನೆ ಆಗಿದೆ.
ಸಿಎಂ ಆಯ್ಕೆ ಕಸರತ್ತು: ಬಿಜೆಪಿ-ಶಿವಸೇನೆ-ಎನ್‌ಸಿಪಿ ಯ ಮಹಾಯುತಿ ಮೈತ್ರಿಕೂಟದ ಸರ್ಕಾರ ರಚನೆಗೆ ಕಸರತ್ತು ನಡೆಯುತ್ತಿದ್ದು, ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿಯಲು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಹೆಸರು ಮುಂಚೂಣಿಯಲ್ಲಿದೆ. ಈಗಾಗಲೇ ಬಿಜೆಪಿ ಹಿರಿಯ ಮುಖಂಡರು ಫಡ್ನವೀಸ್ ಅವರೇ ಮುಂದಿನ ಸಿಎಂ ಎಂದು ಸುಳಿವು ಕೂಡಾ ನೀಡಿದ್ದಾರೆ. ಆದರೆ ಈ ಬಗ್ಗೆ ಅಂತಿಮ ನಿರ್ಣಯ ಆಗಿಲ್ಲ. ಅದು ಇಂದು ಆಗುವ ಸಾಧ್ಯತೆಗಳಿವೆ.
ಗುಜರಾತ್ ಮಾಜಿ ಸಿಎಂ ಹೇಳಿದ್ದೇನು?:ಮಹಾ ಸಿಎಂ ಆಯ್ಕೆ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ರೂಪಾನಿ, "ಸರ್ಕಾರ ರಚನೆಯಾಗಲಿದೆ. ಚುನಾಯಿತ ಶಾಸಕರೊಂದಿಗೆ ಬುಧವಾರ ಚರ್ಚೆ ನಡೆಯಲಿದೆ. ಒಂದು ಹೆಸರನ್ನು ಅಂತಿಮಗೊಳಿಸಲಾಗುವುದು ಮತ್ತು ನಂತರ ಅದನ್ನು ಪ್ರಕಟಿಸಲಾಗುವುದು" ಎಂದು ಹೇಳಿದರು. ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕನನ್ನು ಅಂತಿಮಗೊಳಿಸುವ ಪ್ರಕ್ರಿಯೆಯು ಪಕ್ಷದ ಸಂಪ್ರದಾಯದಂತೆ ನಡೆಯಲಿದೆ ಎಂದೂ ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.