ಇಂದೋರ್ (ಮಧ್ಯಪ್ರದೇಶ): ಧಾರ್ ಜಿಲ್ಲೆಯಲ್ಲಿರುವ ಭೋಜಶಾಲಾ ಮಂದಿರ ಅಥವಾ ಕಮಲ್ ಮೌಲಾ ಮಸೀದಿ ಸಂಕೀರ್ಣದ ಸಮೀಕ್ಷೆ ನಡೆಸಲು ಮಧ್ಯಪ್ರದೇಶ ಹೈಕೋರ್ಟ್ ಸೋಮವಾರ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ಅನುಮತಿ ನೀಡಿದೆ. ಹಿಂದಿ ಫ್ರಂಟ್ ಫಾರ್ ಜಸ್ಟಿಸ್ ಎಂಬ ಸಂಘಟನೆ ಭೋಜಶಾಲಾ ದೇವಾಲಯ ಕಟ್ಟಡದ ವೈಜ್ಞಾನಿಕ ಸಮೀಕ್ಷೆಗೆ ಅರ್ಜಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಎಸ್ಎ ಧರ್ಮಾಧಿಕಾರಿ ಮತ್ತು ನ್ಯಾ.ದೇವನಾರಾಯಣ್ ಮಿಶ್ರಾ ಅವರ ವಿಭಾಗೀಯ ಪೀಠ ವೈಜ್ಞಾನಿಕ ಪರೀಕ್ಷೆ ಮತ್ತು ಉತ್ಖನನ ನಡೆಸುವಂತೆ ಪುರಾತತ್ವ ಇಲಾಖೆ ನಿರ್ದೇಶನ ನೀಡಿ, ಮುಂದಿನ ವಿಚಾರಣೆಯನ್ನು ಏಪ್ರಿಲ್ 29ಕ್ಕೆ ಮುಂದೂಡಿದೆ.
ಪುರಾತತ್ವ ಇಲಾಖೆಯ ಐವರು ಅಥವಾ ಹೆಚ್ಚಿನ ಅಧಿಕಾರಿಗಳನ್ನೊಳಗೊಂಡ ತಜ್ಞರ ಸಮಿತಿ ರಚನೆ ಮಾಡಬೇಕು. ಇಲಾಖೆಯೆ ನಿರ್ದೇಶಕರು ಅಥವಾ ಹೆಚ್ಚುವರಿ ನಿರ್ದೇಶಕರ ನೇತೃತ್ವದಲ್ಲಿ ಸಿದ್ಧಪಡಿಸಿದ ವರದಿಯನ್ನು ದಾಖಲೆ ಸಹಿತ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ. ಅರ್ಜಿದಾರ ವಕೀಲ ವಿಷ್ಣು ಶಂಕರ್ ಜೈನ್ ಸಾಮಾಜಿಕ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ, ಮಧ್ಯಪ್ರದೇಶದ ಭೋಜಶಾಲಾದಲ್ಲಿ ಎಎಸ್‌ಐ ಸಮೀಕ್ಷೆ ನಡೆಸುವಂತೆ ನಾನು ಮಾಡಿದ್ದ ಮನವಿಗೆ ಹೈಕೋರ್ಟ್ ಒಪ್ಪಿಗೆ ಸೂಚಿಸಿದೆ ಎಂದು ತಿಳಿಸಿದ್ದಾರೆ.