ಲಖನೌ (ಉತ್ತರ ಪ್ರದೇಶ): ಶ್ವಾನ ಪ್ರಿಯರು ಇನ್ನು ಮುಂದೆ ತಮ್ಮ ಮನೆಗಳಲ್ಲಿ ಮುದ್ದಿನ ಶ್ವಾನಗಳನ್ನು ಸಾಕಲು ಪರವಾನಗಿ ಪಡೆಯುವುದು ಕಡ್ಡಾಯ. ಹೀಗೊಂದು ಸೂಚನೆಯನ್ನು ಉತ್ತರ ಪ್ರದೇಶದ ರಾಜಧಾನಿಯಲ್ಲಿ ಹೊರಡಿಸಲಾಗಿದ್ದು, ಪಾಲಿಸದೇ ಇದ್ದಲ್ಲಿ ಅಥವಾ ಪರಿಶೀಲನೆ ವೇಳೆ ನಾಯಿಗಳ ಪರವಾನಗಿ ಇರದೇ ಇರುವುದು ಕಂಡು ಬಂದಲ್ಲಿ ಸ್ಥಳದಲ್ಲೇ ದಂಡ ಹಾಕುವುದಾಗಿ ಲಖನೌ ಮಹಾನಗರ ಪಾಲಿಕೆ ಎಚ್ಚರಿಕೆ ಸಂದೇಶ ರವಾನಿಸಿದೆ.
ಪರವಾನಗಿ ಇಲ್ಲದ ನಿಮ್ಮ ಸಾಕು ನಾಯಿಗಳೊಂದಿಗೆ ಬೆಳಗಿನ ವಾಕಿಂಗ್ ಮಾಡುವ ಅಭ್ಯಾಸ ನಿಮ್ಮಲ್ಲಿದ್ದರೆ ಅದನ್ನು ಈಗಿನಿಂದಲೇ ಬದಲಾಯಿಸಿಕೊಳ್ಳಿ. ಇಲ್ಲವಾದಲ್ಲಿ ಪರವಾನಗಿ ಇಲ್ಲದ ಶ್ವಾನಗಳ ಮಾಲೀಕರಿಂದ 2,500 ರಿಂದ 5,000 ರೂ.ವರೆಗೆ (ತಳಿ ಆಧಾರಿತ) ದಂಡ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ. ಕೆಲವರಿಗೆ ದಂಡ ಸಹ ಹಾಕಲಾಗಿದೆ.
ಲಖನೌದಲ್ಲಿ ಹೀಗೊಂದು ಅಭಿಯಾನವನ್ನು ಇಂದು ಬೆಳ್ಳಂಬೆಳಿಗ್ಗೆ ಆರಂಭಿಸಲಾಗಿದ್ದು, ಶ್ವಾನ ಪ್ರಿಯರನ್ನು ಚಿಂತೆಗೀಡು ಮಾಡಿದೆ. ಬೆಳಗಿನ ಜಾವ ಸಾಕು ನಾಯಿಗಳೊಂದಿಗೆ ವಾಯುವಿಹಾರಕ್ಕೆ ಬಂದ ಜನರನ್ನು ಆಯಾ ಪ್ರದೇಶದಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಪರವಾನಗಿ ಇಲ್ಲದ ಶ್ವಾನಗಳ ಮಾಲೀಕರಿಗೆ ಎಚ್ಚರಿಕೆಯ ಸಹ ನೀಡಲಾಗಿದೆ.
ಪರವಾನಗಿ ಪಡೆದವರು:ಲಖನೌದಲ್ಲಿ ಸುಮಾರು 10 ಸಾವಿರ ಸಾಕು ನಾಯಿಗಳಿವೆ. ಮೂರು ಸಾವಿರ ಮಂದಿ ಮಾತ್ರ ಪರವಾನಗಿ ಪಡೆದಿದ್ದಾರೆ. ಮಹಾನಗರ ಪಾಲಿಕೆಯು ಈ ಹಿಂದೆಯೂ ಪ್ರಚಾರಾಂದೋಲನ ನಡೆಸುವ ಮೂಲಕ ಪರವಾನಗಿ ಮಾಡುವ ಬಗ್ಗೆ ಜಾಗೃತಿ ಮೂಡಿಸಿತ್ತು. ಆದರೂ ಜನರು ಪರವಾನಗಿ ಪಡೆಯಲು ಆಸಕ್ತಿ ತೋರುತ್ತಿಲ್ಲ. ಈಗ ನಗರಸಭೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಪ್ರತಿ ವಲಯದಲ್ಲೂ ಸಾಕು ನಾಯಿ ಮಾಲೀಕರಿಂದ ಪರವಾನಗಿ ಪಡೆಯಲಾಗುತ್ತಿದೆ. ಅದನ್ನು ಪೂರೈಸದವರಿಗೆ ತಕ್ಷಣ ದಂಡ ವಿಧಿಸಲಾಗುತ್ತಿದೆ ಎಂದು ನಗರ ಪಶು ಸಂಗೋಪನಾ ಅಧಿಕಾರಿ ಅಭಿನವ ವರ್ಮಾ ಎಚ್ಚರಿಕೆ ನೀಡಿದ್ದಾರೆ.