ನವದೆಹಲಿ: ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರು ಮುಂದಿನ ಸೇನಾ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಪ್ರಸ್ತುತ ಉಪ ಸೇನಾ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ದ್ವಿವೇದಿ ಅವರು ಇದೇ ಜೂನ್ 30 ರಂದು ನಿವೃತ್ತಿ ಹೊಂದಲಿರುವ ಜನರಲ್ ಮನೋಜ್ ಪಾಂಡೆ (ಸೇನಾ ಮುಖ್ಯಸ್ಥ) ಅವರ ಸ್ಥಾನವನ್ನು ಅಲಂಕರಿಸಲಿದ್ದಾರೆ.
ಸೇನೆಯ ಉಪ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ದ್ವಿವೇದಿ ಅವರು 2022 - 24ರ ವರೆಗೆ ಉಧಮ್‌ಪುರ ಮೂಲದ ಉತ್ತರ ಕಮಾಂಡ್‌ನ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ (ಜಿಒಸಿ-ಇನ್-ಸಿ) ಆಗಿ ಸೇವೆ ಸಲ್ಲಿಸಿದ್ದರು. ಅವರ ಸೇವಾ ಅನುಭವವನ್ನು ಆಧರಿಸಿ 30ನೇ ಸೇನಾ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ.
ಶಿಕ್ಷಣ:ಉಪೇಂದ್ರ ದ್ವಿವೇದಿ ಅವರು ಸೈನಿಕ್ ಸ್ಕೂಲ್ ರೇವಾ, ನ್ಯಾಷನಲ್ ಡಿಫೆನ್ಸ್ ಕಾಲೇಜ್ ಮತ್ತು ಯುಎಸ್ ಆರ್ಮಿ ವಾರ್ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿದ್ದು, ರಕ್ಷಣಾ ಮತ್ತು ನಿರ್ವಹಣೆಯಲ್ಲಿ M Phil ಮತ್ತು ಸ್ಟ್ರಾಟೆಜಿಕ್ ಸ್ಟಡೀಸ್ ಮತ್ತು ಮಿಲಿಟರಿ ಸೈನ್ಸ್‌ನಲ್ಲಿ ಎರಡು ಸ್ನಾತಕೋತ್ತರ ಪದವಿಗಳನ್ನು ಹೊಂದಿದ್ದಾರೆ.
1984 ರಂದು ಭಾರತೀಯ ಸೇನೆಯ ಪದಾತಿ ದಳಕ್ಕೆ (ಜಮ್ಮು ಮತ್ತು ಕಾಶ್ಮೀರ ರೈಫಲ್ಸ್) ದ್ವಿವೇದಿ ಅವರನ್ನು ನಿಯೋಜಿಸಲಾಗಿತ್ತು. ಸುಮಾರು 39 ವರ್ಷಗಳ ಕಾಲ ರೆಜಿಮೆಂಟ್ (18ಜಮ್ಮು ಮತ್ತು ಕಾಶ್ಮೀರ ರೈಫಲ್ಸ್), ಬ್ರಿಗೇಡ್ (26 ಸೆಕ್ಟರ್ ಅಸ್ಸಾಂ ರೈಫಲ್ಸ್), ಡಿಐಜಿ ಅಸ್ಸಾಂ ರೈಫಲ್ಸ್ (ಪೂರ್ವ) ಮತ್ತು 9 ಕಾರ್ಪ್ಸ್‌ನಲ್ಲಿ ಸೇವೆ ಸಲ್ಲಿಸಿರುವ ಅನುಭವ ಹೊಂದಿದ್ದಾರೆ.
ಸೇವಾ ಪ್ರಶಸ್ತಿಗಳು: ಉಪೇಂದ್ರ ದ್ವಿವೇದಿ ಅವರು ಹಲವಾರು ಶೌರ್ಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಪರಮ ವಿಶಿಷ್ಟ ಸೇವಾ ಪದಕ (PVSM), ಅತಿ ವಿಶಿಷ್ಟ ಸೇವಾ ಪದಕ (AVSM), ಮೂರು GOC-in-C ಕಮೆಂಡೇಶನ್ ಕಾರ್ಡ್‌ಗಳು ಸೇರಿದಂತೆ ಅನೇಕ ಶೌರ್ಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಶಸ್ತ್ರಾಸ್ತ್ರ ಸಂಗ್ರಹಣೆಯ ಸಂಶೋಧನೆ ಮತ್ತು ವರದಿ ತಂಡದ ಭಾಗವಾಗಿಯೂ ಅವರು ಕಾರ್ಯ ನಿರ್ವಹಿಸಿದ್ದಾರೆ.
ಜ.ಮನೋಜ್ ಪಾಂಡೆ: ಕಳೆದ ಏಪ್ರಿಲ್ 30, 2022ರಂದು ಜನರಲ್ ಮನೋಜ್ ಪಾಂಡೆ ಅವರನ್ನು ಸೇನಾ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿತ್ತು. ಕಳೆದ ತಿಂಗಳು ಮೇ.31 ರಂದ ಅವರ ಅಧಿಕಾರವಧಿ ಪೂರ್ಣಗೊಂಡಿತ್ತು. ಆದರೆ ಕ್ಯಾಬಿನೆಟ್ ನೇಮಕಾತಿ ಸಮಿತಿಯಿಂದ ಒಂದು ತಿಂಗಳ ಅಧಿಕಾರವಧಿ ವಿಸ್ತರಣೆ ಮಾಡಲಾಗಿತ್ತು ಇದೀಗ ಜೂನ್ 30, 2024ಕ್ಕೆ ಅವರ ಅಧಿಕಾರವಧಿ ಪೂರ್ಣಗೊಳ್ಳಲಿದೆ.
ಇದನ್ನೂ ಓದಿ:ಮೋದಿ ಸಂಪುಟದಲ್ಲಿರುವ ಶೇ.66ರಷ್ಟು ಮಂತ್ರಿಗಳ ವಯಸ್ಸು 51 ರಿಂದ 70 ವರ್ಷ! - ADR Report