ತೆಹ್ರಿ(ಉತ್ತರಾಖಂಡ್):ಜಮ್ಮು ಮತ್ತು ಕಾಶ್ಮೀರದ ಕಥುವಾದಲ್ಲಿ ಸೋಮವಾರ ಭಾರತೀಯ ಸೇನಾ ಬೆಂಗಾವಲು ಪಡೆಯ ಮೇಲೆ ನಡೆದ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದಾರೆ. ಈ ಎಲ್ಲ ಸೈನಿಕರು ಉತ್ತರಾಖಂಡ ರಾಜ್ಯದವರು. ಇದರಲ್ಲಿ ಒಂದೇ ಕುಟುಂಬದ ಇಬ್ಬರು ಸಹೋದರರು ಎರಡು ತಿಂಗಳಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ ಎಂಬುದು ಗಮನಾರ್ಹ.
ತೆಹ್ರಿ ಜಿಲ್ಲೆಯ ರೈಫಲ್‌ಮ್ಯಾನ್ ಆದರ್ಶ್ ನೇಗಿ, ನಾಯಕ್ ವಿನೋದ್ ಸಿಂಗ್ ಮತ್ತು ಪೌರಿ ಜಿಲ್ಲೆಯ ಹವಾಲ್ದಾರ್ ಕಮಲ್ ಸಿಂಗ್, ಅನುಜ್ ನೇಗಿ ಹಾಗು ರುದ್ರಪ್ರಯಾಗ ಜಿಲ್ಲೆಯ ನೈಬ್ ಸುಬೇದಾರ್ ಆನಂದ್ ಸಿಂಗ್ ಮಣಿದ ಯೋಧರು. ದೇವಪ್ರಯಾಗದ ನಿವಾಸಿ, 26 ವರ್ಷದ ಆದರ್ಶ್ ನೇಗಿ ಅವರ ಚಿಕ್ಕಪ್ಪನ ಮಗ ಕೂಡ ಎರಡು ತಿಂಗಳ ಹಿಂದಷ್ಟೇ ಹುತಾತ್ಮರಾಗಿದ್ದರು. ಈ ಮೂಲಕ ಇಬ್ಬರು ಪುತ್ರರನ್ನು ಈ ಕುಟುಂಬ ದೇಶಕ್ಕಾಗಿ ಕಳೆದುಕೊಂಡಿದೆ.
ಆದರ್ಶ್ ನೇಗಿ ಸಹೋದರ ಪ್ರಣಯ್ ನೇಗಿ (33) ಭಾರತೀಯ ಸೇನೆಯಲ್ಲಿ ಮೇಜರ್ ಆಗಿದ್ದರು. ಲೇಹ್‌ನಲ್ಲಿ ಕರ್ತವ್ಯದಲ್ಲಿದ್ದಾಗ ಇದೇ ಏಪ್ರಿಲ್ 30ರಂದು ಅನಾರೋಗ್ಯದಿಂದ ಮೃತಪಟ್ಟಿದ್ದರು. ಈ ಸಾವಿನ ಆಘಾತದಿಂದ ನೇಗಿ ಕುಟುಂಬ ಹೊರಬರುವ ಮುನ್ನವೇ ಮತ್ತೊಬ್ಬ ಮಗನ ಸಾವಿನ ಸುದ್ದಿ ಬರಸಿಡಿಲಂತೆ ಅಪ್ಪಳಿಸಿದೆ. ಸೋಮವಾರ ಉಗ್ರರ ದಾಳಿಯಲ್ಲಿ ಆದರ್ಶ್ ನೇಗಿ ಪ್ರಾಣ ಅರ್ಪಿಸಿದ ವಿಷಯ ತಿಳಿಯುತ್ತಿದ್ದಂತೆ ಇಡೀ ಕುಟುಂಬಕ್ಕೆ ದುಃಖದಲ್ಲಿ ಮುಳುಗಿದೆ. ಅಲ್ಲದೇ, ಇಡೀ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ.