ನವದೆಹಲಿ: 'ನಾನು ನನ್ನ ಜೀವಮಾನದ ಓರ್ವ ಮಾರ್ಗದರ್ಶಕನನ್ನು ಕಳೆದುಕೊಂಡಿದ್ದೇನೆ' ಎಂದು ಮಾಜಿ ಪ್ರಧಾನಿ, ಆರ್ಥಿಕ ತಜ್ಞ ಮನಮೋಹನ್ ಸಿಂಗ್ ನಿಧನಕ್ಕೆ ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ವಿಶೇಷ ರೀತಿಯಲ್ಲಿ ಕಂಬನಿ ಮಿಡಿದಿದ್ದಾರೆ. ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಸಿಂಗ್ ಅವರೊಂದಿಗಿನ ಕೆಲವು ಘಟನಾವಳಿಗಳ ಸಹಿತ ಸಂತಾಪ ಸೂಚಿಸಿದ್ದಾರೆ.
'ಸಿಂಗ್ ಅವರು ಭಾರತವನ್ನು ಅಪಾರ ಬುದ್ಧಿವಂತಿಕೆ ಮತ್ತು ಸಮಗ್ರತೆಯಿಂದ ಮುನ್ನಡೆಸಿದವರು. ಅವರ ನಮ್ರತೆ ಮತ್ತು ಅರ್ಥಶಾಸ್ತ್ರದ ಆಳವಾದ ತಿಳಿವಳಿಕೆಯು ರಾಷ್ಟ್ರವನ್ನು ಉನ್ನತ ಮಟ್ಟಕ್ಕೆ ಏರುವಂತೆ ಮಾಡಿದೆ. ನಾನು ಒಬ್ಬ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ. ಅವರನ್ನು ದೇಶದ ಕೋಟ್ಯಂತರ ಮಂದಿ ನೆನಪಿಸಿಕೊಳ್ಳುತ್ತಾರೆ. ಅವರ ಮಾರ್ಗದರ್ಶನಕ್ಕೆ ನಾನು ಸದಾ ಚಿರಋಣಿ. ಸಿಂಗ್ ಅವರ ಪತ್ನಿ ಹಾಗೂ ಕುಟಂಬಕ್ಕೆ ನಾನು ಸಂತಾಪ ಸೂಚಿಸುತ್ತೇನೆ' ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ದೂರ ದೃಷ್ಠಿಯುಳ್ಳ ರಾಜನೀತಿ ತಜ್ಞನನ್ನು ಕಳೆದುಕೊಂಡಿದ್ದೇವೆ - ಖರ್ಗೆ:ಅದೇ ರೀತಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು 'ಮಾಜಿ ಪ್ರಧಾನಿ ನಿಧನದಿಂದ ದೂರ ದೃಷ್ಠಿಯುಳ್ಳ ರಾಜನೀತಿ ತಜ್ಞನನ್ನು ಕಳೆದುಕೊಂಡಿದ್ದೇವೆ. ದೇಶದ ಆರ್ಥಿಕತೆಗೆ ಅವರು ನೀಡಿದ ಕೊಡುಗೆ ಎಂದಿಗೂ ಮರೆಯಲಾಗದು. ಅವರ ಆರ್ಥಿಕ ಉದಾರೀಕರಣ ನೀತಿಗಳು ಮತ್ತು ಹಕ್ಕುಗಳ ಆಧಾರಿತ ಕಲ್ಯಾಣ ಮಾದರಿಯು ಕೋಟ್ಯಂತರ ಭಾರತೀಯರ ಜೀವನವನ್ನು ಗಾಢವಾಗಿ ಪರಿವರ್ತಿಸಿದೆ. ರಾಷ್ಟ್ರ ನಿರ್ಮಾಣಕ್ಕೆ ಅವರು ನೀಡಿರುವ ಕೊಡುಗೆ ಭಾರತೀಯ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡಿದೆ. ಅವರ ನೀತಿಗಳು ಲಕ್ಷಾಂತರ ಜನರನ್ನು ಬಡತನದಿಂದ ಹೊರತಂದಿವೆ' ಎಂದು ಬರೆದುಕೊಂಡಿದ್ದಾರೆ.
'ಅವರೊಂದಿಗೆ ಕೆಲಸ ಮಾಡಿರುವುದು ನನಗೆ ಹೆಮ್ಮೆ ತಂದಿದೆ. ರಾಷ್ಟ್ರ ನಿರ್ಮಾಣಕ್ಕೆ ಅವರ ಕೊಡುಗೆ ಅಪಾರ. ಮಾತುಗಳಿಗಿಂತ ಕ್ರಿಯಾಶೀಲ ವ್ಯಕ್ತಿಯಾಗಿದ್ದರು. ಭಾರತಕ್ಕಾಗಿ ನೀಡಿದ ಅವರ ಕೊಡುಗೆ ಯಾವಾಗಲೂ ಶಾಶ್ವತ. ಸಿಂಗ್ ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು' ಎಂದು ಸಹ ಹೇಳಿಕೊಂಡಿದ್ದಾರೆ.