ನವದೆಹಲಿ:ಬಿ ಆರ್ ಅಂಬೇಡ್ಕರ್ ವಿರುದ್ಧ ಗೃಹ ಸಚಿವ ಅಮಿತ್ ಶಾ ಅವರು ಅವಮಾನಕರ ಹೇಳಿಕೆ ನೀಡಿದ್ದು, ಅವರು ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ಸಂಸದರು ಪಟ್ಟು ಹಿಡಿದ ಕಾರಣ, ಸಂಸತ್ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು. ಈ ಹಿನ್ನೆಲೆಯಲ್ಲಿ ಲೋಕಸಭೆಯನ್ನು ಮಧ್ಯಾಹ್ನ 2ರವರೆಗೆ ಮುಂದೂಡಲಾಗಿದೆ.
ಇಂದು ಸದನ ಆರಂಭವಾಗುತ್ತಿದ್ದಂತೆ, ಮಂಗಳವಾರ ಬಿಆರ್ ಅಂಬೇಡ್ಕರ್ ಕುರಿತು ಗೃಹ ಸಚಿವ ಅಮಿತ್ ಶಾ ಆಡಿದ ಮಾತುಗಳ ಕುರಿತು ಕಾಂಗ್ರೆಸ್ ಸಂಸದರು ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೇ, ಈ ಹೇಳಿಕೆ ಸಂಬಂಧ ಕ್ಷಮೆಯಾಚಿಸಬೇಕು ಎಂದು ಪಟ್ಟು ಹಿಡಿದರು.
ಕಾಂಗ್ರೆಸ್ ಸದಸ್ಯರ ಪ್ರತಿಭಟನೆಗೆ ತಿರುಗೇಟು ನೀಡಿದ ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘ್ವಾಲ್ , ಕಾಂಗ್ರೆಸ್ ಅಂಬೇಡ್ಕರ್ ಅನ್ನು ಯಾವಾಗಲೂ ಅವಮಾನಿಸಿದೆ. ಇದರಿಂದಲೇ ಲೋಕಸಭಾ ಚುನಾವಣೆಗೆ ಸೋಲು ಅನುಭವಿಸಿದರು. ಅಲ್ಲದೇ, ಕಾಂಗ್ರೆಸ್ ಇದೀಗ ಅಂಬೇಡ್ಕರ್ ಅವರನ್ನು ಗೌರವಿಸದಿದ್ದರೂ, ಅವರ ಹೆಸರನ್ನು ಒತ್ತಾಯ ಪೂರ್ವಕವಾಗಿ ತೆಗೆದುಕೊಳ್ಳುತ್ತಿದೆ ಎಂದು ಕುಟುಕಿದರು.