ನವದೆಹಲಿ: ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆಯಂಥ ಅಕ್ರಮಗಳನ್ನು ತಡೆಯಲು ಕೇಂದ್ರ ಸರ್ಕಾರ ಕಠಿಣ ಕಾನೂನು ಜಾರಿಗೆ ಮುಂದಾಗಿದೆ. ಸಾರ್ವಜನಿಕ ಪರೀಕ್ಷೆ (ಅನ್ಯಾಯದ ವಿಧಾನಗಳ ತಡೆಗಟ್ಟುವಿಕೆ) ಮಸೂದೆಯನ್ನು ಮಂಗಳವಾರ ಲೋಕಸಭೆ ಅಂಗೀಕರಿಸಿತು. ಇದು ಕಾಯ್ದೆ ರೂಪ ಪಡೆದಲ್ಲಿ, ಅಕ್ರಮಗಳಲ್ಲಿ ತೊಡಗಿದವರಿಗೆ ಕನಿಷ್ಠ 3 ವರ್ಷಗಳ ಜೈಲು ಶಿಕ್ಷೆ ಮತ್ತು 1 ಕೋಟಿ ರೂಪಾಯಿ ದಂಡವನ್ನೂ ವಿಧಿಸಬಹುದು.
ಕೇಂದ್ರ ಸಿಬ್ಬಂದಿ ಸಚಿವಾಲಯದ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಸೋಮವಾರ ಸಾರ್ವಜನಿಕ ಪರೀಕ್ಷೆ (ಅನ್ಯಾಯದ ವಿಧಾನಗಳ ತಡೆಗಟ್ಟುವಿಕೆ)-2024 ಮಸೂದೆಯನ್ನು ಸದನದಲ್ಲಿ ಮಂಡಿಸಿದ್ದರು. ಮಂಗಳವಾರ ವಿಧೇಯಕದ ಮೇಲೆ ಚರ್ಚೆ ನಡೆಯಿತು. ಪ್ರತಿಪಕ್ಷಗಳ ಸದಸ್ಯರು ಕೆಲವು ತಿದ್ದುಪಡಿಗಳನ್ನು ಮಾಡುವಂತೆ ಪ್ರಸ್ತಾಪಿಸಿದರು. ಆದರೆ, ಇವುಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ ಮಸೂದೆಗೆ ಸದನ ಅನುಮೋದನೆ ನೀಡಿತು.
ಕಠಿಣ ಕ್ರಮಗಳೇನು?: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ), ಸಿಬ್ಬಂದಿ ನೇಮಕ ಆಯೋಗ (ಎಸ್ಎಸ್ಸಿ), ರೈಲ್ವೆ ಇಲಾಖೆ, ಬ್ಯಾಂಕಿಂಗ್ ವಲಯದ ನೇಮಕಾತಿ ಪರೀಕ್ಷೆಗಳು ಮತ್ತು ರಾಷ್ಟ್ರೀಯ ಪರೀಕ್ಷೆ ಸಂಸ್ಥೆ (ಎನ್ಟಿಎ) ನಡೆಸುವ ಎಲ್ಲ ಕಂಪ್ಯೂಟರ್ ಆಧರಿತ ಪರೀಕ್ಷೆಗಳಿಗೆ ಈ ವಿಧೇಯಕ ಅನ್ವಯಿಸಲಿದೆ. ಇದರ ಪ್ರಕಾರ, ಪರೀಕ್ಷಾ ವಂಚನೆ ಸಾಬೀತಾದಲ್ಲಿ ಅಪರಾಧಿಯನ್ನು ಕನಿಷ್ಠ 3ರಿಂದ 5 ವರ್ಷ ಜೈಲಿಗೆ ಹಾಕಬಹುದು. ಸಂಘಟಿತ ಅಕ್ರಮಗಳಲ್ಲಿ ಭಾಗಿಯಾಗಿರುವವರಿಗೆ 5ರಿಂದ 10 ವರ್ಷ ಜೈಲು ಶಿಕ್ಷೆ ಹಾಗೂ ಕನಿಷ್ಠ 1 ಕೋಟಿ ರೂ. ದಂಡ ವಿಧಿಸಬಹುದು.
ಸಾರ್ವಜನಿಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಮತ್ತು ಕೀ ಉತ್ತರಗಳ ಸೋರಿಕೆ, ಯಾವುದೇ ರೀತಿಯಲ್ಲಿ ಅನಧಿಕೃತವಾಗಿ ಅಭ್ಯರ್ಥಿಗಳಿಗೆ ಪ್ರತ್ಯಕ್ಷ, ಪರೋಕ್ಷವಾಗಿ ನೆರವಾಗುವ, ಕಂಪ್ಯೂಟರ್ ನೆಟ್ವರ್ಕ್, ಕಂಪ್ಯೂಟರ್ ಸಂಪನ್ಮೂಲ, ಕಂಪ್ಯೂಟರ್ ವ್ಯವಸ್ಥೆಯನ್ನು ತಿರುಚುವ ವ್ಯಕ್ತಿ, ಗುಂಪಿನ ವಿರುದ್ಧ ಕ್ರಮ ಜರುಗಿಸಬಹುದು. ಈ ವಿಧೇಯಕವು ಹಣದ ಲಾಭಕ್ಕಾಗಿ ಅನ್ಯಾಯದ ವಿಧಾನಗಳಲ್ಲಿ ತೊಡಗಿರುವ ಸಂಘಟಿತ ಗುಂಪು ಮತ್ತು ಸಂಸ್ಥೆಗಳನ್ನು ನಿಯಂತ್ರಿಸುವ ಗುರಿ ಹೊಂದಿದೆ. ಆದರೆ, ಇದರ ನಿಬಂಧನೆಗಳು ಅಭ್ಯರ್ಥಿಗಳಿಗೆ ರಕ್ಷಣೆ ನೀಡುತ್ತೇವೆ ಎಂದು ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.