ಲಖನೌ (ಉತ್ತರಪ್ರದೇಶ) :ವಿಪಕ್ಷಗಳ ಇಂಡಿಯಾ ಕೂಟದಲ್ಲಿ ಸೀಟು ಹಂಚಿಕೆ ಸೂತ್ರ ಅಂತಿಮವಾಗುವ ಮೊದಲೇ ಉತ್ತರಪ್ರದೇಶದಲ್ಲಿ ಅಖಿಲೇಶ್ ಯಾದವ್ ಅವರ ನೇತೃತ್ವದ ಸಮಾಜವಾದಿ ಪಕ್ಷ (ಎಸ್ಪಿ) ಮುಂಬರುವ ಲೋಕಸಭೆ ಚುನಾವಣೆಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನೇ ಅಖೈರುಗೊಳಿಸಿದೆ. ಅಖಿಲೇಶ್ ಅವರ ಪತ್ನಿ ಸೇರಿದಂತೆ 16 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಮಂಗಳವಾರ ಪಕ್ಷ ಬಿಡುಗಡೆ ಮಾಡಿದೆ.
ಅಖಿಲೇಶ್ ಪತ್ನಿ, ಹಾಲಿ ಸಂಸದೆಯಾಗಿರುವ ಡಿಂಪಲ್ ಯಾದವ್ ತಮ್ಮ ಕ್ಷೇತ್ರವಾದ ಮೈನ್ಪುರಿಯಿಂದ ಮರು ಆಯ್ಕೆ ಬಯಸಿದ್ದಾರೆ. ಇದಲ್ಲದೇ ಸಂಭಾಲ್ ಕ್ಷೇತ್ರದಿಂದ ಪಕ್ಷದ ನಾಯಕ ಶಫೀಕರ್ ರಹಮಾನ್ ಬರ್ಕೆ ಅವರಿಗೆ ಟಿಕೆಟ್ ನೀಡಲಾಗಿದೆ.
ಉಳಿದಂತೆ ಫಿರೋಜಾಬಾದ್ನಿಂದ ಅಕ್ಷಯ್ ಯಾದವ್, ಖೇರಿಯಿಂದ ಉತ್ಕರ್ಷ್ ವರ್ಮಾ, ಎತಾಹ್ ಕ್ಷೇತ್ರಕ್ಕೆ ದೇವೇಶ್ ಶಕ್ಯಾ, ಧೌರಾಹರಾಕ್ಕೆ ಆನಂದ್ ಭದೌರಿಯಾ, ಬದೌನ್ನಿಂದ ಧರ್ಮೇಂದ್ರ ಯಾದವ್, ಲಖನೌನಿಂದ ರವಿದಾಸ್ ಮೆಹ್ರೋತ್ರಾ, ಹಲವು ವಿವಾದಗಳಿಂದ ಕುಖ್ಯಾತಿಯಾಗಿರುವ ಉನ್ನಾವೋ ಕ್ಷೇತ್ರದಿಂಣದ ಅನು ಟಂಡನ್, ಅಕ್ಬರ್ಪುರ್ ಕ್ಷೇತ್ರದಿಂದ ರಾಜಾರಾಂ ಪಾಲ್, ಫರುಕಾಬಾದ್ನಿಂದ ಡಾ. ನವಲ್ ಕಿಶೋರ್ ಶಕ್ಯಾ, ಫೈಜಾಬಾದ್ಗೆ ಅವಧೇಶ್ ಪ್ರಸಾದ್, ಬೈದಾ ಕ್ಷೇತ್ರಕ್ಕೆ ಶಿವಶಂಕರ್ ಸಿಂಗ್ ಪಟೇಲ್, ಬಸ್ತಿಯಲ್ಲಿ ರಾಮಪ್ರಸಾದ್ ಚೌಧರಿ, ಅಂಬೇಡ್ಕರ್ ನಗರದಿಂದ ಲಾಲ್ಜಿ ವರ್ಮಾ, ಸಿಎಂ ಯೋಗಿ ಆದಿತ್ಯನಾಥ್ ಅವರ ಕ್ಷೇತ್ರವಾದ ಗೋರಖ್ಪುರದಿಂದ ಕಾಜಲ್ ನಿಶಾದ್ ಅವರಿಗೆ ಪಕ್ಷ ಟಿಕೆಟ್ ನೀಡಲು ಮುಂದಾಗಿದೆ.